ಭೈರಪ್ಪನವರ ಪ್ರತಿಭಾ ಪ್ರೋತ್ಸಾಹ - ದೇಶಭಕ್ತಿ

ಭೈರಪ್ಪನವರು ಪ್ರತಿಭಾವಂತರಿಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಹೇಗೆ ಪ್ರೋತ್ಸಾಹ ನೀಡುತ್ತಿದ್ದರು ಹಾಗು ಅವರಿಗೆ ಭಾರತದ ಬಗ್ಗೆ ಇರುವ ಕಾಳಜಿಯ ಬಗೆಗೆ ಶ್ರೀ ಕಶ್ಯಪ್ ನಾಯಕರು ಹೃದ್ಯವಾಗಿ ನಿರೂಪಿಸಿದ್ದಾರೆ

ಭೈರಪ್ಪನವರ ಪ್ರತಿಭಾ ಪ್ರೋತ್ಸಾಹ - ದೇಶಭಕ್ತಿ

Read the Previous Episodes

Also Read: ಪಥದರ್ಶಕ ಭೈರಪ್ಪನವರು

Also Read: ಪರ್ವಕ್ಕೆ ತಯಾರಿ - ಪಿ.ವಿ. ಕಾಣೆಯವರ ಅಧ್ಯಯನ: ಭೈರಪ್ಪನವರ ಮಾತಿನಲ್ಲಿ

ಉಪನ್ಯಾಸದಲ್ಲಿ ಲೇಖಕರ ಭಾಷಣವನ್ನು ಮೆಚ್ಚಿ, ಮಾತಿನ ವೇಗ ಜಾಸ್ತಿಯಾಯಿತು ಎಂದು ತಿದ್ದಿದರು. “ಎಲ್ಲ ಹೇಳಬೇಕಲ್ಲ; ಕುತೂಹಲ ಹುಟ್ಟಿಸಿ ಓದಲು ಪ್ರೇರೇಪಿಸಿ” ಎಂದು ಸಲಹೆ ನೀಡಿದರು ಭೈರಪ್ಪನವರು. ೨೦೧೯ ಚುನಾವಣೆಯಲ್ಲಿ ದೇಶದ ಬೆಳವಣಿಗೆಗೆ ಮೋದಿಯಂತಹ ನಾಯಕರು ಅಗತ್ಯ ಎಂಬ ಆತಂಕ ಅವರದ್ದು.

ಮಾತು ಹೀಗೆಯೇ ಧರ್ಮಶಾಸ್ತ್ರದಲ್ಲಿ ಉಲ್ಲೇಖಿತವಾದ ತೀರ್ಥಸ್ಥಳಗಳ ಬಗೆಗೆ ಮೂಡಿತು. ಆಗ, “ನೀವು ಆವರಣದಲ್ಲಿ ಕಾಶಿಯ ವರ್ಣನೆ ಮಾಡಿದ್ದೀರಲ್ಲ ಸರ್, ಅದಕ್ಕೂ ಕಾಣೆಯವರ ಪುಸ್ತಕದಲ್ಲಿದ್ದ ಕಾಶಿಯ ವರ್ಣನೆಗೂ ಬಹಳ ಸಾಮ್ಯವಿದೆ. ನೀವು ಅಲ್ಲಿಂದಲೇ ನೋಡಿ ಬರೆದಿದ್ದ?” ಎಂದು ನಾನು ಕೇಳಿದೆ.

“ಇಲ್ಲ. ನಾನು ಅದನ್ನ ಓದಿದ್ದು ನಿಜ, ಆದರೆ ಅಲ್ಲಿಂದ ತೆಗೆದುಕೊಳ್ಳಲಿಲ್ಲ. ನಾನು ಕಾಶಿಗೆ ಬಹುಶಃ ಹದಿಮೂರು – ಹದಿನಾಲ್ಕು ಸತಿ ಹೋಗಿರಬಹುದು. ಒಮ್ಮೆ ಕಾಶಿಯ ಬಗೆಗೆ ದೀರ್ಘವಾಗಿ ವ್ಯಾಸಂಗ ಮಾಡಿ ಬರೆಯಬಹುದು ಅನ್ನಿಸಿತು. ವ್ಯಾಸಂಗ ಮಾಡಿದೆ; ಅದರ ಬಗ್ಗೆ ಆವರೆಗೆ ಬಂದಿದ್ದ ಎಲ್ಲ ಪುಸ್ತಕಗಳನ್ನೂ ತಿರುವಿಹಾಕಿದೆ. ಕೆಲವು ಪುಸ್ತಕದಲ್ಲಿ, ಲೇಖನಗಳಲ್ಲಿ ಅದರ ನಿಜವಾದ ಚಿತ್ರಣ ನೀಡಿಲ್ಲ ಅಂತಲೂ ಅನ್ನಿಸ್ತು. ಆಗ ನಾನು ಒಂದು ಲೇಖನ ಬರೀಬೇಕು ಅಂತ ಶುರುಮಾಡಿದೆ” ಎನ್ನುವಷ್ಟರಲ್ಲಿ ಮಿತ್ರ ಅರ್ಜುನ,

“ನಮಗೂ ಕೊಡಿ ಸರ್, ಓದ್ತೀವಿ. ಅದೆಲ್ಲೂ ಪ್ರಕಟ ಆಗಿಲ್ಲ ಅನ್ಸುತ್ತೆ,” ಎಂದು ಕೇಳಿದ.

“ಇಲ್ಲ, ನಾನು ಬರೀಲಿಲ್ಲ. ಶುರುವು ಮಾಡ್ತಿದ್ದ ಹಾಗೆ ನಿಲ್ಲಿಸಿಬಿಟ್ಟೆ. ನನಗೆ ಅನ್ನಿಸ್ತು, ಇದನ್ನ ಒಂದು ಸಂಶೋಧನ ಲೇಖನದ ತರಹ ಬರುದ್ರೆ, ಇದು ಒಂದು ಸ್ವಲ್ಪ ದಿನ ನಿಲ್ಲತ್ತೆ. ಕೆಲವು ದಿನ ಆದ್ಮೇಲೆ, ನನ್ನ ಸಂಶೋಧನೆಗಿಂತ ಮತ್ತೂ ಇನ್ನೇನೋ ಪುರಾತತ್ತ್ವದ ಪುರಾವೆ ಕಾಣುತ್ತೆ, ಅದನ್ನ ಮತ್ತೊಬ್ರು ಬರೀತಾರೆ. ಅಥವಾ, ನನ್ನ ಅಭಿಪ್ರಾಯಕ್ಕಿಂತ ಭಿನ್ನವಾಗಿದೆ ಅಂತ ಇನ್ನ್ಯಾರಾದ್ರೂ ಬರೀತಾರೆ. ಇಂತಹ ಸಂಶೋಧನ ಲೇಖನಗಳೇನೂ ಕಡಿಮೇನಾ? ಕಾಲ ಪ್ರವಾಹದಲ್ಲಿ ಇದು ಕೊಚ್ಚಿಕೊಂಡು ಹೋಗುತ್ತೆ. ನಾನು ಯೋಚಸಿದ್ದು ಏನು! – ನನಗೆ ಕಾಶಿ ಬಗ್ಗೆ ಬರೀಬೇಕು ಅಂತ ಯಾಕೆ ಅನ್ನುಸ್ತು? ಅದಕ್ಕೆ ನನ್ನ ಅನುಭವ, ಶ್ರದ್ಧೆ, ಅಲ್ಲಿಯ ಇತಿಹಾಸ, ಭಾರತೀಯತೆ, ಇವೆಲ್ಲವೂ ಕಾರಣ ಅನೋದನ್ನ ನಾನೇ ಕಂಡುಕೊಂಡೆ. ಈ ಕಾರಣಕ್ಕೆ ನಾನು ಸಂಶೋಧನ ಲೇಖನ ಬರದ್ರೆ ನನ್ನ ಬುದ್ಧಿ ಕೆಲಸ ಮಾಡುತ್ತೆ, ಮನಸ್ಸಲ್ಲ. ನನ್ನ ಅನುಭವಾನ ಮತ್ತೊಬ್ಬರ ಅನುಭವವನ್ನಾಗಿ ಮಾಡಬೇಕು ಅಂದ್ರೆ, ಅದು ಸೃಜನಾತ್ಮಕವಾಗಿ ಹೊರಹೊಮ್ಮಬೇಕು. ಅದು ನನಗೆ ಅನ್ನಿಸಿದ್ದು. ಅದಕ್ಕೆ, ಆ ಮಾಹಿತಿಯನ್ನೆಲ್ಲ ಇಟ್ಟುಕೊಂಡೇ ಇದ್ದೆ, ಆದರೆ ಮತ್ತ್ಯಾವಾಗಾದರೂ ಕೆಲಸಕ್ಕೆ ಬರಬಹುದು ಅಂತ ಬಿಟ್ಟೆ” ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಸಂಶೋಧನ ಲೇಖನಕ್ಕೆ ಭೈರಪ್ಪನವರು ತಯಾರಿ ಮಾಡಿದ್ದು ಮೂವತ್ತು – ನಲವತ್ತು ವರ್ಷಗಳ ಹಿಂದೆ. ಆವರಣ ಬಂದದ್ದು ಹದಿನೈದು ವರ್ಷಗಳ ಹಿಂದೆ. ಹೀಗಾಗಿ, ಇಷ್ಟು ಕಾಲ ಈ ಒತ್ತಡ ನಿಮ್ಮಲ್ಲಿ ಹೇಗೆ ಉಳಿದಿತ್ತು ಎಂದು ಕೇಳಿದ್ದಕ್ಕೆ, ಸಹಜವಾಗಿಯೇ ಉತ್ತರಿಸಿದರು:

“ಒತ್ತಡ ಇದ್ರೆ ಅಲ್ಲವೇ ಕಾದಂಬರಿ ಬರೋದು. ಕಾಶಿ ಬಗ್ಗೆ ತಂತುವಿನಲ್ಲೂ ಬರೆದಿದ್ದೇನೆ, ಆವರಣದಲ್ಲೂ ಬರೆದಿದ್ದೇನೆ. ಆವರಣ ಬರೆಯೋಕ್ಕೆ ಮುನ್ನವೂ ಮತ್ತೊಮ್ಮೆ ಕಾಶಿಯನ್ನ ನೋಡಿ ಬಂದಿದ್ದೆ. ಹೊಸದೇನೋ ಸಿಗುತ್ತೆ ಅಂತ ಅಲ್ಲ, ಮುಂಚೆ ಆಗಿದ್ದ ಅನುಭವವನ್ನೇ ಮತ್ತೊಮ್ಮೆ ಮನಸ್ಸಿಗೆ ತರಿಸಿಕೊಳ್ಳೋಣ ಅಂತ.”

ಹೀಗೆ ಹಲವು ವಿಚಾರಗಳ ಮಂಥನವಾದ ಮೇಲೆ, ನಾವು ಹೊರೆಟವು. ಮುಂದಿನ ದಿನಗಳಲ್ಲಿ ರಾಮಸ್ವಾಮಿಯವರ ಮಹಾಭಾರತದ ಬೆಳವಣಿಗೆಯ ಬಗೆಗಿನ ಅನೂದಿತ ಪುಸ್ತಕವನ್ನು ಪರಾಮರ್ಶಿಸಿ ಒಂದು ದೀರ್ಘವಾದ ಮುನ್ನುಡಿಯನ್ನು ಬರೆದುಕೊಟ್ಟರು. ಆಸಕ್ತರು ಪ್ರೇಕ್ಷಾ ಪ್ರತಿಷ್ಠಾನದಿಂದ ಹೊರತಂದ Evolution of the Mahabharata ಎಂಬ ಪುಸ್ತಕವನ್ನು ನೋಡಬಹುದು.

ಭೈರಪ್ಪನವರ ಪ್ರೋತ್ಸಾಹ

 ಒಮ್ಮೆ ಕೃಷ್ಣ ಕುಮಾರರೆಂಬುವರು ಕೌಟಿಲ್ಯನ ಅರ್ಥಶಾಸ್ತ್ರದ ಬಗೆಗೆ ಉಪನ್ಯಾಸ ಮಾಲಿಕೆಯನ್ನು ಮೈಸೂರಿನಲ್ಲಿ ಏರ್ಪಡಿಸಿದ್ದರು. ಇದಕ್ಕಾಗಿ ನನ್ನನ್ನು, ನನ್ನ ಮಿತ್ರ ಅರ್ಜುನನನ್ನು, ಮತ್ತೂ ಹಲವರನ್ನು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ನನಗೆ ಅರ್ಥಶಾಸ್ತ್ರ ಮತ್ತು ಸಂವಿಧಾನ ಎಂಬ ವಿಷಯ ಕೊಟ್ಟಿದ್ದರು, ಅರ್ಜುನ ಅರ್ಥಶಾಸ್ತ್ರ ಮತ್ತು ಕೆಲವು ಸಂಸ್ಕೃತ ಕಾವ್ಯಗಳ ಬಗೆಗೆ ಮಾತನಾಡಿದಂತೆ ನೆನಪು.

ಆ ಉಪನ್ಯಾಸ ಸರಣಿಯಲ್ಲಿಯೇ ಕೊನೆಯದು ನನ್ನದು. ಸಭಾಂಗಣಕ್ಕೆ ಹೋದರೆ, ನನ್ನ ಉಪನ್ಯಾಸಕ್ಕಾಗಿ ಭೈರಪ್ಪನವರು, ಡಾ| ಟಿ. ವಿ. ವೆಂಕಟಾಚಲ ಶಾಸ್ತ್ರಿಗಳು, ಡಾ| ಎಚ್. ವಿ. ನಾಗರಾಜರಾಯರು, ಪ್ರಧಾನ ಗುರುದತ್ತರು, ಸಿ.ಕೆ.ಎನ್. ರಾಜರನ್ನು ಒಳಗೊಂಡ ವಿದ್ವಾಂಸರ ಸಾಲು ಮುಂದೆ ಕುಳಿತಿತ್ತು. ಇವರಲ್ಲಿ ಯಾರಿಗೂ ಅರ್ಥಶಾಸ್ತ್ರ ಹೊಸದೇನಲ್ಲ, ಅವರಿಗೆ ಅರಿವಿಲ್ಲದ ಯಾವ ವಿಚಾರವನ್ನೂ ನಾನು ಪ್ರಾಯಶಃ ಹೇಳುತ್ತಲೂ ಇರಲಿಲ್ಲ. ನನಗಿಂತ ಮುಂಚಿನ ಉಪನ್ಯಾಸಗಳಿಗೂ ಇವರೆಲ್ಲರೂ ಬಂದಿದ್ದನ್ನು ಅರ್ಜುನ ನನಗೆ ಹೇಳಿದ್ದ.

ನಾನು ಅಲ್ಲಿಗೆ ಹೋದಾಗ, ಕೃಷ್ಣಕುಮಾರರಿಗೆ “ಇಂತಹ ದೊಡ್ಡವರನ್ನೆಲ್ಲ ನನ್ನ ಉಪನ್ಯಾಸಕ್ಕೆ ಯಾಕೆ ಕರೆದಿರಿ?” ಎಂದು ಕೇಳಿದೆ. “ನಾನು ಅವರಿಗೆ ಉಪನ್ಯಾಸದ ವಿಚಾರ ತಿಳಿಸಿದ್ದು ನಿಜ. ಯಾವ ಬಲವಂತವೂ ಇಲ್ಲದೇ ಅವರೆಲ್ಲರೂ ಪ್ರತಿ ದಿನವೂ ಬರುತ್ತಿದ್ದಾರೆ. ಇದು ನಮ್ಮ ಸೌಭಾಗ್ಯ, ನಿಮ್ಮದೂ ಕೂಡ” ಎಂದರು.

ಸೌಭಾಗ್ಯವೇನೋ ನಿಜ, ಆದರೆ ಅವರ ಮುಂದೆ ಮಾತನಾಡಲು ನನ್ನಲ್ಲಿ ಸ್ವಲ್ಪ ಅಳುಕಿದದ್ದೂ ನಿಜವೇ. ನನ್ನ ಸಿದ್ಧತೆಯಂತೂ ಇತ್ತು; ಆದ್ದರಿಂದ ಧೈರ್ಯವಾಗಿ ಒಂದೂವರೆ ಘಂಟೆಯ ಉಪನ್ಯಾಸ ನೀಡಿದೆ. ಎಲ್ಲ ಹಿರಿಯರೂ ಸಂಪೂರ್ಣವಾಗಿ ಕೇಳಿದರು, ಮೆಚ್ಚಿದರು. ಉಪನ್ಯಾಸದಲ್ಲಿ ನಾನು ಅರ್ಥಶಾಸ್ತ್ರದಲ್ಲಿ ಬರುವ ವ್ಯವಹಾರದ ಅಧ್ಯಾಯಗಳು ಇಂದಿಗೂ ಹೇಗೆ ಪ್ರಸ್ತುತ ಎಂಬುದಕ್ಕೆ ಇಂದಿನ ಕಾನೂನು, ಸಂವಿಧಾನಕ್ಕೆ ಪೂರಕವಾದ ಅರ್ಥಶಾಸ್ತ್ರದ ಭಾಗಗಳನ್ನು ತೋರಿಸಿ ಹೇಳಿದ್ದೆ.

ಆ ಗಹನವಾದ ವಿಷಯಕ್ಕೆ ಒಂದೂವರೆ ಘಂಟೆ ಕಡಿಮೆಯೇ. ಆದರೂ ಎಲ್ಲವನ್ನೂ ಅಷ್ಟರಲ್ಲಿಯೇ ತುರುಕಿಸಿ  ಹೇಳಬೇಕಿತ್ತು. ನಾನು ನಿರ್ಧರಿಸಿದ ಪ್ರತಿಯೊಂದು ವಿಚಾರವನ್ನೂ ಹೇಳಬೇಕೆಂಬ ಮನೀಷೆಯಿಂದ, ನನ್ನ ಉಪನ್ಯಾಸವು ವೇಗವಾಗಿಯೇ ಸಾಗಿತ್ತು. ವೇದಿಕೆಯಿಂದ ಇಳಿಯುತ್ತಿದ್ದಂತೆ ಹಲವರು ಪ್ರೇಕ್ಷಕರು ನನ್ನಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ನನ್ನನ್ನು ಅಭಿನಂದಿಸಿದರು. ಹಲವರು ಹಿರಿಯರು ನನಗೆ ಶಹಬಾಷಗಿರಿಯನ್ನು ಕೊಟ್ಟರು. ಅವರೆಲ್ಲರೂ ಹೇಳಿದ ಉತ್ಪ್ರೇಕ್ಷೆಯ ಮಾತುಗಳಿಂದ ನನ್ನ ಉಪನ್ಯಾಸದಲ್ಲಿ ಯಾವ ನ್ಯೂನತೆಯೂ ಇಲ್ಲೆವೇನೋ ಎಂದು ಭ್ರಮಿಸಿದೆ.

ಉಪನ್ಯಾಸವಾದ ಬಳಿಕ, ತಮ್ಮ ಆಸನದಲ್ಲಿಯೇ ಕುಳಿತಿದ್ದ ಭೈರಪ್ಪನವರು ನನ್ನನ್ನು ಕರೆದು ಪಕ್ಕಕ್ಕೆ ಕೂಡಿಸಿಕೊಂಡರು.

“ನೋಡಿ, ಗ್ರಾಮಫೋನ್‌ನಲ್ಲಿ ನಾವು ಪ್ಲೇಟ್ ಹಾಕಿದಾಗ ಅದು ಒಂದು ವೇಗದಲ್ಲಿ ತಿರುಗುತ್ತ ಇರುತ್ತೆ. ಅದನ್ನು ಬೇಗನೇ ತಿರುಗಿಸಿದರೆ, ಏನಾಗುತ್ತೆ? ಸಂಗೀತ ಕೇಳಿದರೂ ಅದು ವೇಗವಾಗಿ ಓಡುತ್ತೆ, ಆಸ್ವಾದನೆ ಕಡಿಮೆ ಆಗುತ್ತೆ. ಅಲ್ಲವಾ?” ಎಂದು ಕೇಳಿದರು.

“ಹೌದು, ನಿಜ,” ಎಂದೆ.

“ನೀವು ಇವತ್ತು ಮಾತನಾಡಿದ್ದ ವಿಚಾರ ತುಂಬಾ ಚೆನ್ನಾಗಿದ್ದರೂ, ನಿಮ್ಮ ಮಾತಿನ ವೇಗ ಜಾಸ್ತಿಯಾಯಿತು. ಸ್ವಲ್ಪ ನಿಧಾನಕ್ಕೆ ಮಾತನಾಡಿದ್ದರೆ, ಇನ್ನೂ ಚೆನ್ನಾಗಿ ಇರ್ತಿತ್ತು” ಎಂದು ತಿಳಿಹೇಳಿದರು.

ನಾನು,

“ತಿದ್ದುಕೊಳ್ತೀನಿ ಸರ್. ಆದರೆ, ಹೇಳೋ ಅಂತಹ ವಿಚಾರ ತುಂಬಾ ಜಾಸ್ತಿ ಇತ್ತು. ಒಂದೂವರೆ ಘಂಟೆಯಲ್ಲಿ ಇಷ್ಟೆಲ್ಲ ಹೇಳೋದು ಕಷ್ಟ ಅಂತ ಸ್ವಲ್ಪ ಬೇಗನೆಯೇ ಹೇಳಿದೆ,” ಎಂದದ್ದಕ್ಕೆ,

“ಸ್ವಲ್ಪೇ ಹೇಳಿ. ಎಲ್ಲವನ್ನೂ ಹೇಳಬೇಕು ಅಂತ ಯಾವ ನಿಯಮ ಇದೆ? ಇನ್ನೂ ಮುಕ್ಕಾಲು ಘಂಟೆ ಸಮಯ ಕೊಟ್ಟರೆ ನಿಮಗೆ ಹೇಳೋಕ್ಕೆ ವಿಷಯ ಇದೀಯೋ ಇಲ್ಲವೋ? ಇದ್ದೇ ಇರುತ್ತೆ. ನಾವು ಎಷ್ಟನ್ನು ತಿಳಿಸಿಕೊಡ್ತೀವಿ ಅನ್ನೋದಕ್ಕಿಂತ ಎಷ್ಟು ಮನದಟ್ಟು ಮಾಡಿ ಕೋಡ್ತೀವಿ ಅನ್ನೋದು ಮುಖ್ಯ. ಉಪನ್ಯಾಸದ ಮುಖ್ಯ ಉದ್ದೇಶವೇನು? ಗ್ರಂಥದಲ್ಲಿರುವ ಎಲ್ಲ ವಿಷಯಾನೂ ಸಂಪೂರ್ಣವಾಗಿ ಹೇಳಬೇಕು ಅಂತಲಾ ಅಥವಾ ವಿಷಯದ ಬಗ್ಗೆ ಕುತೂಹಲ ಹುಟ್ಟಿಸಿ ಜನರು ಅದನ್ನು ಓದಕ್ಕೆ ಪ್ರೇರೇಪಿಸಬೇಕು ಅಂತಲಾ? ನನ್ನ ಪ್ರಕಾರ ಎರಡನೆಯದು ಉತ್ತಮ. ನೀವು ಅದಕ್ಕೆ ಕೈಹಾಕಿ.”

ಇದು ಭರಪ್ಪನವರ ಮಾರ್ಗ. ಆ ಬಳಿಕ ನನ್ನ ಭಾಷಣದಲ್ಲಿ ಅವರಿಗೆ ಇಷ್ಟವಾದ ಹಲವು ವಿಚಾರವನ್ನು ನನ್ನಲ್ಲಿ ಹೇಳಿ ಮೆಚ್ಚಿಕೊಂಡರು. ಅವರ ಮಾತನ್ನು ಕೇಳಿದ ಮೇಲೆ, ನಾನು ಆ ವಿಚಾರವನ್ನೇ ಇನ್ನೊಮ್ಮೆ ಯೋಚಿಸಿ, ನನ್ನ ಉಪನ್ಯಾಸದ ರೆಕಾರ್ಡಿಂಗ್‌ನ್ನು ತರುಹಿಸಿಕೊಂಡು ಕೇಳಿದೆ. ಭೈರಪ್ಪನವರ ಮಾತು ಸತ್ಯವೆಂಬ ಅರಿವಾಯಿತು. 

ಚುನಾವಣೆ ಮತ್ತು ಪ್ರಚಾರ

೨೦೧೯ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದ ಸಮಯ. ದೇಶದಲ್ಲಿ ಮತ್ತೊಮ್ಮೆ ಮೋದಿಯವರು ಬರದೆ ಇದ್ದರೆ ದೇಶಕ್ಕೆ ಏಳಿಗೆಯಾಗದು ಎಂಬುದು ಹಲವರ ಆತಂಕ. ಇದಕ್ಕೆ ನಾವೂ (ನಾನು ಮತ್ತು ನನ್ನ ಗೆಳೆಯರ ಗುಂಪು) ಸೇರಿದ್ದೆವು. ನಾವು ಯಾವ ರಾಜಕೀಯ ಪಕ್ಷಕ್ಕೂ ಸೇರಿದವರಲ್ಲ. ಕೆಲವು ಮಿತ್ರರು ಸೇರಿ ನಮ್ಮದೇ ರೀತಿಯಲ್ಲಿ ಮೋದಿಯವರ ಬಗೆಗೆ ಪ್ರಚಾರ ಮಾಡಬೇಕು ಎಂದು ತೀರ್ಮಾನಿಸಿದೆವು. ಹಲವರು ಗಣ್ಯರ ಸಂದರ್ಶನ ಮಾಡಿ, ಅವರು ವ್ಯಕ್ತಪಡಿಸಿದ ವಿಚಾರಗಳ ವಿಡಿಯೋ ತುಣುಕಗಳನ್ನು ಪ್ರಕಟಿಸುತ್ತಿದ್ದೆವು.

ಈ ನಿಟ್ಟಿನಲ್ಲಿ ಭೈರಪ್ಪನವರನ್ನು ಕಂಡು, ನಿಮ್ಮ ಸಂದರ್ಶನ ಬೇಕು ಎಂದು ಕೇಳಿಕೊಂಡೆವು. ಹಲವರನ್ನು ಹೀಗೆ ಕೇಳಿಕೊಂಡಾಗ ಐದರಿಂದ – ಹತ್ತು ನಿಮಿಷದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿ, ಮೋದಿಯವರಿಗೆ ಮತ ನೀಡಲು ಹೇಳುತ್ತಿದ್ದರು. ನಮಗೂ ಇಂತಹ ಚಿಕ್ಕ ಚಿಕ್ಕ ವಿಡಿಯೋಗಳನ್ನು ಸಾಮಾಜಿಕ ಜಲತಾಣದಲ್ಲಿ ಜನರಿಗೆ ತಲುಪಿಸಿವುದು ಸುಲಭವಾಗುತ್ತಿತ್ತು. ಭೈರಪ್ಪನವರನ್ನು ಕೇಳಿಕೊಂಡಾಗ ಅವರು ನಮಗೆ ಒಂದು ದಿನ ಗುರುತು ಮಾಡಿಕೊಟ್ಟರು.

ಮಿತ್ರ ಸಂದೀಪ ಬಾಲಕೃಷ್ಣ, ಅರ್ಜುನ, ಹರಿ ರವಿಕುಮಾರ್ ಮತ್ತು ನಾನು ಅವರ ಮನೆಗೆ ಹೋದಾಗ, ನಾವು ಮಾಡುತ್ತಿರುವ ಕೆಲಸವನ್ನು ವಿಚಾರಿಸಿದರು. “ಎಷ್ಟು ಜನ ನೋಡ್ತಾರೆ? ಹಳ್ಳಿಯಲ್ಲೆಲ್ಲ ಇದನ್ನು ಪ್ರಚಾರ ಮಾಡ್ತಾ ಇದ್ದೀರಾ ಅಥವಾ ಬೆಂಗಳೂರಿನಂತಹ ನಗರಗಳಿಗೆ ಸೀಮಿತವಾ?” ಎಂದೆಲ್ಲ ಪ್ರಶ್ನಿಸಿ, ಯಾವ ಯಾವ ವಿಚಾರ ಹೇಳಬೇಕೆಂಬುದನ್ನು ತಮ್ಮ ಮನಸ್ಸಿನಲ್ಲಿಯೇ ಪಟ್ಟಿ ಮಾಡಿಕೊಂಡು ನಮಗೊಮ್ಮೆ ಅದರ ಸಾರಾಂಶ ಹೇಳಿದರು.

“ಮೋದಿಗೆ ಮತ ನೀಡಬೇಕು ಅಂತ ಸುಮ್ಮನೆ ಹೇಳಿದರೆ, ನಾನು ಮೋದಿ ಪರ ಅನ್ನೊದು ಮಾತ್ರ ತಿಳಿಯುತ್ತೆ ಹೊರತು ಅದಕ್ಕೆ ವೈಚಾರಿಕ ಸ್ಪಷ್ಟತೆ ಬರೋಲ್ಲ. ಅದು ಬರಬೇಕು ಅಂದರೆ ನಮ್ಮ ರಾಜಕೀಯ ಇತಿಹಾಸವನ್ನ ಗೊತ್ತು ಮಾಡಬೇಕು. ಈಗ ನಮ್ಮ ದೇಶಕ್ಕೆ ಬೇಕಾಗಿರೋದು ಇತಿಹಾಸ. ನಾವು ಯಾವ ತಪ್ಪು ಮಾಡಿದ್ವಿ, ಈ ಮನುಷ್ಯ ಏನನ್ನ ಸರಿಪಡಿಸೋಕ್ಕೆ ಹೋಗ್ತಾ ಇದ್ದಾನೆ, ಅದಕ್ಕೆ ಇವನಿಗೆ ಮತ ಹಾಕ್ಬೇಕು ಅನ್ನೋದು ಜನಕ್ಕೆ ಸ್ಪಷ್ಟವಾಗಿ ಗೊತ್ತಾಗಬೇಕು. ಒಮ್ಮೆ ಅದು ಗೊತ್ತಾದ್ರೆ, ವೋಟಿಗೆ ದುಡ್ಡು ಪಡ್ಡು ಎಲ್ಲ ಅಷ್ಟಾಗಿ ನಡಿಯೋಲ್ಲ. ಸ್ವಲ್ಪ ಕಮ್ಮಿ ಆಗುತ್ತೆ. ನಾನು ವಿಡಿಯೋದಲ್ಲಿ ಹೇಳ್ತೀನಿ. ಅದನ್ನ ಪ್ರಸಾರ ಮಾಡಿ. ಆದರೆ, ನೀವೆಲ್ಲ ಯುವಕರು. ಪ್ರತಿಯೊಂದು ಹಳ್ಳಿಗೂ ಓಡಾಡಿ ಬನ್ನಿ. ನೀವೇ ಹೋಗಿ ಹೇಳೋಕ್ಕೂ ಭೈರಪ್ಪನಂಥವರು ಮನೆಯಲ್ಲಿ ಕುಳಿತು ಮಾತನಾಡಕ್ಕೂ ಬಹಳ ವ್ಯತ್ಯಾಸವಿದೆ. Politics should be on the ground, not inside the walls. ಚಕ್ರವರ್ತಿ ಸೂಲಿಬೆಲೆ ಇದ್ದಾರಲ್ಲ, ಆತ ಈ ಕೆಲಸ ಮಾಡ್ತಾ ಇದ್ದಾನೆ. ಅವನಿಗೆ ಇದನ್ನ ಕಳುಹಿಸಿ ಕೊಡಿ” – ಇದು ಭೈರಪ್ಪನವರ ಮಾತು.

ಸುಮಾರು ಮೂರು ನಾಲ್ಕು ಘಂಟೆಗಳ ಕಾಲ ನಮ್ಮ ದೇಶದ ರಾಜಕೀಯ ಇತಿಹಾಸವನ್ನು ಕುರಿತು ಸವಿಸ್ತಾರವಾಗಿ ಭೈರಪ್ಪನವರು ಮಾತನಾಡಿದರು. ಕೆಲವೇ ಕೆಲವರು ಶ್ರೇಷ್ಠ ರಾಜಕಾರಣಿಗಳನ್ನು, ರಾಜಕೀಯ ವಿಶ್ಲೇಷಕರನ್ನು ಹೊರತುಪಡೆಸಿದರೆ, ಅಷ್ಟು ಕೂಲಂಕಷವಾಗಿ ಪ್ರಾಯಶಃ ನಮ್ಮ ನಾಡಿನ ಯಾವ ರಾಜಕೀಯ ನಾಯಕರೂ ಭಾರತದ ರಾಜಕೀಯವನ್ನು ಗಮನಿಸಿಲ್ಲ; ಮಾತನಾಡುವುದು ದೂರದ ಮಾತು. ಆ ಎಲ್ಲ ವಿಡಿಯೋ YouTubeನಲ್ಲಿ ಇಂದಿಗೂ ಲಭ್ಯವಿದೆ; ಆಸಕ್ತರು ನೋಡಬಹುದು.

ಇದು ನಡೆಯುವಾಗ ಪ್ರತಿ ವಿಷಯದಲ್ಲೂ ಭೈರಪ್ಪನವರು ಎಷ್ಟು ಗಮನವಿಡುತ್ತಾರೆ ಎಂಬುದು ನಿದರ್ಶನವಾಗಿದ್ದನ್ನು ಇಲ್ಲಿ ಹಂಚಿಕೊಳ್ಳಬೇಕು. ನಾವು ಕ್ಯಾಮರಾ ಪ್ರಾರಂಭಿಸವಷ್ಟರಲ್ಲಿ, “ಸ್ವಲ್ಪ ತಾಳಿ” ಎನ್ನುತ್ತ, ಮೊದಲು ಕಾಲಿಂಗ್ ಬೆಲ್‌ನ್ನು ಆರಿಸಲು ಹೇಳಿದರು. ಅವರ ಮನೆಗೆ ಅತಿಥಿಗಳ ಸಂಖ್ಯೆ ಹೆಚ್ಚಿನದೇ; ಅವರು ಓದುತ್ತಿದ್ದಾಗಲೋ, ಮಲಗಿದ್ದಾಗಲೋ ಅವರನ್ನು ಹೇಳಕೇಳದೆಯೇ ಬರುವವರಿಂದ ಉಪದ್ರವವಾಗಬಾರದೆಂದು ಅವರು ಕಾಲಿಂಗ್ ಬೆಲ್‌ಗೆ ಒಳಗಿನಿಂದ ಸ್ವಿಚ್ ಒಂದನ್ನು ಇರಿಸಿದ್ದರು. ಅದನ್ನು ಆರಿಸಲು ನಮಗೆ ಹೇಳಿ, ಅದರ ಬಳಿಕ, ವಿಡಿಯೋ ಮಾಡುತ್ತಿದ್ದ ಸತೀಶನಿಗೆ “ಇಲ್ಲಿ ಬೆಳಕು ಸರಿಯಾಗಿದ್ದೀಯ? ಹೊರಗಿನ ವಾಹನದ ಸದ್ದು ಬರುತ್ತಿದ್ದೀಯ? ನಿಮ್ಮ ವಿಡಿಯೋದಲ್ಲಿ ಎಲ್ಲಿಯತನಕ ಫ್ರೇಮ್ ಬರುತ್ತಿದೆ?” ಎಂದೆಲ್ಲ ವಿಚಾರಿಸಿದ್ದುಂಟು. ಅವರ ಅಂಗಿಯ ಬಣ್ಣ ಬಾಕ್ಗ್ರೌಂಡ್‌ಗೆ ಹೊಂದುತ್ತಿರಲಿಲ್ಲ. ಅದನ್ನು ನಾವು ನಮ್ಮ-ನಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದಾಗ, ಅಂಗಿ ಬದಲಾಯಿಸುತ್ತೇನೆ ಎನ್ನುತ್ತಾ ತಮ್ಮ ಬಟ್ಟೆ ಬದಲಾಯಿಸಿಕೊಂಡು ಬಂದರು. ಒಟ್ಟಿನಲ್ಲಿ ಯಾವ ಕೆಲಸವಾದರೂ, ಅದು  ಅಚ್ಚುಕಟ್ಟಾಗಿರಬೇಕು.

ಒಮ್ಮೆ ಗಣೇಶರು ಭೈರಪ್ಪನವರನ್ನು “ನಿಮಗೆ ಯಾವುದಾದರೂ ವಿಷಯದಲ್ಲಿ ಆತಂಕವುಂಟೇ?” ಎಂದು ಕೇಳಿದ್ದರಂತೆ. ಮೊದಲಿಗೆ ಭೈರಪ್ಪನವರು “ಏನೂ ಇಲ್ಲ” ಎಂದು ಫೋನನ್ನು ಇಟ್ಟಿದ್ದರಂತೆ. ಮಾರನೆಯ ದಿನ ಗಣೇಶರಿಗೆ ಕರೆ ಮಾಡಿ, “ನೀನು ನೆನ್ನೆ ಕೇಳದ್ಯಲ್ಲ, ನನಗೆ ಏನಾದ್ರೂ ಆತಂಕವುಂಟೇ ಅಂತ. ನಾನು ಇಲ್ಲ ಅಂತ ಹೇಳದೆ. ಆಮೇಲೆ ಅದರ ಬಗ್ಗೆ ಯೋಚಿಸದೆ. ನನಗೆ ಆತಂಕ ಇದೆ... ನಮ್ಮ ದೇಶದಲ್ಲಿ ಮೋದಿಯಂತಹ ನಾಯಕರಿಗೆ ಏನಾದರೂ ಆದರೆ, ದೇಶದಲ್ಲಿ ಆಗುತ್ತಿರುವ ಒಳ್ಳೆಯ ಬೆಳವಣಿಗೆ ನಿಲ್ಲುತ್ತದೆ ಎನ್ನೋ ಆತಂಕ. ಅದು ನನಗೆ ಆಗಾಗ ಕಾಡುತ್ತೆ” ಎಂದಿದ್ದರು.

ಇದು ಭೈರಪ್ಪನವರಿಗೆ ದೇಶದ ಬಗೆಗಿದ್ದ ಕಾಳಜಿ.

ಸಶೇಷ

DONATE TO THE DHARMA DISPATCH

RELATED READING

Busting the Spurious Narrative of 300 Ramayanas

Busting the Spurious Narrative of 300 Ramayanas

A.K. Ramanujan's infamous essay "300 Ramayanas," was a deliberate fabrication to rob Maharshi Valmiki's authorship of the Sanskrit original

How Srinatha Won the Kavisarvabhauma Title

How Srinatha Won the Kavisarvabhauma Title

Read the thrilling tale of how Srinatha won the epithet, Kavisarvabhauma or the Emperor of Poets

Dindima Kavi’s Defeat and Srinatha’s Magnanimity

Dindima Kavi’s Defeat and Srinatha’s Magnanimity

The Art of Intellectual Combat: Srinatha vs. Dindima in the Vijayanagara Court

Mahakavi Srinatha Throws a Challenge to Arunagirinatha Kavi

Mahakavi Srinatha Throws a Challenge to Arunagirinatha Kavi

Nori Narasimha Sastry fleshes out Mahakavi Srinatha's character as a feisty and talented poet who throws a deceptive poetic challenge to his counterpart, Arunagirinatha