ಶ್ರೀ ಬಿ.ಕೆ.ಎಸ್ ವರ್ಮ: ಕುಂಚ ವಿರಿಂಚಿಯ ಒಳನೋಟ - ಒಂದು ಮಧುರ ಸ್ಮೃತಿ

ನಮ್ಮ ಕಾಲದ ರವಿ ವರ್ಮನೆಂದೇ ಪ್ರಸಿದ್ಧರಾದ ಅಪ್ರತಿಮ ಪ್ರತಿಭೆಯ ಶಿಖರವಾಗಿದ್ದ ಚಿತ್ರಕಲಾಮಾಂತ್ರಿಕ ದಿವಂಗತ ಶ್ರೀ ಬಿ. ಕೆ. ಏಸ್ ವರ್ಮ ಅವರಿಗೆ ಖ್ಯಾತ ವಕೀಲರು ಹಾಗು ಕಲಾರಸಿಕರಾಗಿರುವ ಶ್ರೀ ಕಶ್ಯಪ್ ನಾಯಕ್ ಅವರ ಅಂತರಂಗದ ನಮನ.
ಶ್ರೀ ಬಿ.ಕೆ.ಎಸ್ ವರ್ಮ: ಕುಂಚ ವಿರಿಂಚಿಯ ಒಳನೋಟ - ಒಂದು  ಮಧುರ ಸ್ಮೃತಿ
Published on
8 min read

ಒಬ್ಬ ಮಹಾಕಲಾವಿದನನ್ನು ಕುಶಲೋಪರಿ ಮಾತನಾಡಲು ಭೇಟಿ ಮಾಡುವುದರಲ್ಲಿ ಹೆಚ್ಚಿನ ಸೊಬಗನ್ನು ನಾ ಕಾಣೆ. ಕಲಾವಿದ ಅಂತರಂಗ ಜೀವಿ; ಬಹಿರಂಗದಲ್ಲಿ ಆತ ಎಲ್ಲರಂತೆಯೇ ಒಬ್ಬ. ಲೋಕದಲ್ಲಿ ಕಾಣುವ ಯಾವುದೋ ವಸ್ತುವಿಗೋ, ಘಟನೆಗೋ ಆತ ಮಿಡಿಯುವ ಪರಿಯಲ್ಲಿ, ಆತನ ಭಾವನಾತ್ಮಕ ಪ್ರತಿಕ್ರಿಯೆಯಲ್ಲಿ ಆತನ ಕಲೆ ಅಡಗಿದೆ. ಕಲಾವಿದನು ತನ್ನ ಕಲೆಯನ್ನು ಕುರಿತು ಮಾತನಾಡುವುದಾದರೆ ಅಥವಾ ಆತನ ಕಲೆಯು ರೂಪಗೊಳ್ಳುವಾಗ ಆತನಲ್ಲಿ ಮುಕ್ತವಾಗಿ ಮಾತನಾಡಿದರೆ, ಕಲಾವಿರಿಂಚಿಯನ್ನೇ ಕಾಣುವ ಅನುಭವವಾಗುವುದು. ಇದು ವಿಶಿಷ್ಟವಾದುದು. ಇಂತಹ ಒಂದು ವಿಶಿಷ್ಟವಾದ ಅನುಭವ ನನ್ನ ಭಾಗ್ಯಕ್ಕೆ ಒದಗಿ ಬಂತು. ಬಿ. ಕೆ. ಎಸ್. ವರ್ಮರನ್ನು ಭೇಟಿ ಮಾಡಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು.

ವರ್ಮರನ್ನು ಅವರ ಮನೆಯ ಚಿತ್ರಶಾಲೆಯಲ್ಲಿ ಭೇಟಿ ಮಾಡಬೇಕೆಂಬುದು ನನ್ನ ಬಹಳ ದಿನಗಳ ಆಸೆಯಾಗಿತ್ತು. ನನ್ನ ಈ ಆಸೆಗೆ ಒತ್ತಾಸೆ ನೀಡಿ ಅದು ಫಲಿಸುವಂತೆ ಮಾಡಿದ್ದು ನನ್ನ ವಿದ್ವನ್ಮಿತ್ರ ಎಚ್. ಎ. ವಾಸುಕಿ. ಮೊದಲೇ ಗುರುತುಮಾಡಿದ ದಿನದಂದು ನನ್ನ ಮಗಳೊಡನೆ ನನ್ನನ್ನು ವಾಸುಕಿ ವರ್ಮರ ಮನೆಗೆ ಕರೆದೊಯ್ದರು. ಶಿವನ ಚಿತ್ರವೊಂದನ್ನು ಮೂಡಿಸುತ್ತ ನಿಂತಿದ್ದ ವರ್ಮರು, ತಮ್ಮ ಕುಂಚವನ್ನು ಬದಿಯಲ್ಲಿಟ್ಟು ಬಣ್ಣದಲ್ಲಿ ಮಿಂದಿದ್ದ ತಮ್ಮ ಕೈಗಳನ್ನು ಜೋಡಿಸಿತ್ತ ನಮ್ಮನ್ನು ಬರಮಾಡಿಕೊಂಡರು. ಅವರ ಕರಕುಶಲತೆಯ ನಿದರ್ಶನವಾಗಿ ಬಣ್ಣಗಳು ಕೈಗಳಿಗೆ ಮೆತ್ತಿಕೊಂಡಿದ್ದರೂ, ಅವರ ಮನಸ್ಸಿನ ಶುಭ್ರತೆಯ ಪ್ರತೀಕದಂತೆ ಅವರ ಉಡುಪು ಯಾವುದೇ ಬಣ್ಣದ ಸೋಂಕಿಲ್ಲದೆ ಬೆಳ್ಳಗೆ ಹೊಳೆಯುತ್ತಿತ್ತು.

ವರ್ಮರ ಪರಿಚಯ ನನಗೆ ಮೊದಲೇ ಇದ್ದರೂ, ಪ್ರತ್ಯೇಕವಾಗಿ ಸಂಧಿಸದಿದ್ದ ಕಾರಣ ಅವರ ಮನಸ್ಸಿನಲ್ಲಿ ನನ್ನ ಬಗೆಗೆ ಗಟ್ಟಿಯಾದ ನೆನಪು ಅಂಕುರಿಸಿರಲಿಲ್ಲ.

ವಾಸುಕಿ ನನ್ನನ್ನು ಪರಿಚಯಿಸುತ್ತ ಅವರ ಸ್ಮೃತಿಪುಟಗಳನ್ನು ಹಂತಹಂತವಾಗಿ ತಿರುವಿಹಾಕಿದ್ದಾಯಿತು. ವರ್ಮರ ಮನೆಗೆ ನನ್ನ ಮಗಳು ಮಿಹಿಕ ನೃತ್ಯಶಾಲೆಯಿಂದ ನೇರವಾಗಿ ಬಂದಿದ್ದ ಕಾರಣ ಅದೇ ಸಮವಸ್ತ್ರದ ಉಡುಪಿನಲ್ಲಿದ್ದಳು. ವರ್ಮರು ಆಕೆಯನ್ನು  ಅಕ್ಕರೆಯಿಂದ ಕಂಡರು. ಆಕೆ ನಿರುಪಮ ರಾಜೇಂದ್ರರ ಬಳಿ ನೃತ್ಯವನ್ನು ಕಲಿಯುತ್ತಿದ್ದಾಳೆಂದು ಹೇಳಿದೊಡನೆ, ಆಕೆಯ ಗಲ್ಲವನ್ನು ಸವರಿ, ಮೂಗನ್ನು ಹಿಡಿದು “ಈಕೆಯ ಮೂಗು ಎಷ್ಟು ನೇರವಾಗಿದೆ, ಇಂತಹ ಮೂಗಿದ್ದವರು ಒಳ್ಳೆಯ ಕಲಾವಿದರಾಗುತ್ತಾರಂತೆ; ಒಳ್ಳೆಯ ಕುರುಹು; ಮಗು, ನೀನು ನಿನ್ನ ಗುರುವಂತೆಯೇ ದೊಡ್ಡ ನೃತ್ಯಕಲಾವಿದೆಯಾಗು” ಎನ್ನುತ್ತ ಆಶೀರ್ವದಿಸಿ, “Sir, Nirupama is an excellent artist and an excellent teacher. ಸಾಮಾನ್ಯ ಒಳ್ಳೆಯ ಕಲಾವಿದರು ಒಳ್ಳೆಯ ಗುರುವಾಗಿರುವುದಿಲ್ಲ. ಆದರೆ ನಿರುಪಮ ಅವರಿಗೆ ದೇವರು ಎರಡನ್ನೂ ಕರುಣಿಸಿದ್ದಾನೆ. ಆಕೆ ಅತ್ಯದ್ಭುತವಾಗಿ ನೃತ್ಯವನ್ನು ಮಾಡಬಲ್ಲರು, ತಮ್ಮ ಶಿಷ್ಯರನ್ನು ಅದ್ಭುತವಾಗಿ ತಯಾರು ಮಾಡಲೂಬಲ್ಲರು. She is an exception. ಮಕ್ಕಳ ಸಾಮರ್ಥ್ಯವಿರುವಷ್ಟೂ ಅವರ ಬಳಿ ಕಲಿಯಬಹುದು” ಎಂದು ನಿರುಪಮಾ ಅವರನ್ನು ಕೊಂಡಾಡಿದರು.

ಕಾವ್ಯ-ಚಿತ್ರ-ಗೀತ-ನೃತ್ಯ ಕಾರ್ಯಕ್ರಮಗಳಲ್ಲಿ ಹಲವು ಬಾರಿ ನಿರುಪಮಾ ಅವರೊಡನೆ ವೇದಿಕೆ ಹಂಚಿಕೊಂಡದ್ದನ್ನು ನೆನೆದು, ಆಗ್ಗೆ ಒಂದು ವರ್ಷದ ಹಿಂದೆ ರಂಜನಿ ಮತ್ತು ವಾಸುಕಿಯವರ ರಾಗವಲ್ಲಿ ಫೌಂಡೇಷನ್‌ನಿಂದ ಆದ ಅಂತಹ ಕಾರ್ಯಕ್ರಮದಲ್ಲಿ ರಾಮಾಯಣದ ಅಯೋಧ್ಯಾಕಾಂಡವನ್ನು ಆಧರಿಸದ ನಿರುಪಮಾ ಅವರ ಅತ್ಯದ್ಭುತ ನೃತ್ಯರೂಪಕವನ್ನು ನೆನೆದರು.

ವರ್ಮರ ಚಿತ್ರಶಾಲೆಯಲ್ಲಿ ಮೆರೆದಿದ್ದ ಅವರ ಚಿತ್ರಪಟಗಳ ಮೇಲೆ ನನ್ನ ಕಣ್ಣು ಹಾಯಿತು. ಬೇಲೂರಿನ ದೇವಾಲಯದ ಭಿತ್ತಿಯ ಮೇಲೆ ಶಿಲಾಬಾಲಿಕೆಯರ ಶಿಲ್ಪಗಳನ್ನು ನೋಡುವಾಗ, ಒಂದನ್ನು ಬಿಟ್ಟು ಮುಂದೆ ಸಾಗುವಾಗ ಆಗುವ ಕಷ್ಟವೇ ಅವರ ಚಿತ್ರಶಾಲೆಯಲ್ಲೂ ಅಯಿತು. ಯಾವ ಚಿತ್ರಕ್ಕೆ ಮನಸ್ಸೋಲಲಿಲ್ಲವೆಂದು ಹೇಳಲಸಾಧ್ಯ. ಒಂದೊಂದು ಚಿತ್ರಕ್ಕೂ ವರ್ಮರು ಒಂದೊಂದು ಕತೆಯನ್ನು ಹೇಳುತ್ತ ಬಂದರು.

ಅವರ ಚಿತ್ರಶಾಲೆಯಲ್ಲಿಯೇ ಅತಿ ದೊಡ್ಡ ಚಿತ್ರಪಟವೆನಿಸುವ ಲಕ್ಷ್ಮೀ-ಸರಸ್ವತಿಯರ ಯುಗಳಚಿತ್ರವೊಂದನ್ನು ನೋಡುತ್ತ ನಿಂತಾಗ ವರ್ಮರು, “ಮಿಕ್ಕ ಚಿತ್ರಪಟಗಳಂತೆ ಇದು ನನ್ನ ಚಿತ್ರದ ಪ್ರತಿಯಲ್ಲ; ಇದು ಮೂಲ ಚಿತ್ರವೇ. ಭಾರತದ ಅತಿ ದೊಡ್ಡ ಶ್ರೀಮಂತ ವಣಿಕರಲ್ಲೊಬ್ಬರು ನನಗೆ ಲಕ್ಷ್ಮೀ-ಸರಸ್ವತಿಯರ ವಿಶಿಷ್ಟವಾದ ಚಿತ್ರವೊಂದನ್ನು ಮಾಡಿಕೊಡಿ ಎಂದು ಹೇಳಿದ್ದರು. ನಾನು ಒಪ್ಪಿ ಈ ಚಿತ್ರವನ್ನು ಬಿಡಿಸಿದೆ. ನನಗೆ ಲಕ್ಷ್ಮೀ-ಸರಸ್ವತಿಯರಲ್ಲಿ ಅಭೇದವನ್ನು ಕಾಣಬೇಕೆನ್ನಿಸಿ ಇದನ್ನು ಮೂಡಿಸಿದೆ. ಇದರಲ್ಲಿ ನೋಡಿ, ಒಂದೇ ಮುಖದಲ್ಲಿ ಲಕ್ಷ್ಮೀ, ಸರಸ್ವತಿ ಇಬ್ಬರೂ ಕಾಣುತ್ತಾರೆ. ಅವರವರ ವಾಹನಗಳನ್ನು ಹೀಗೆ ಚಿತ್ರಿಸಿದ್ದೇನೆ, ಅವರ ಆಭರಣಗಳನ್ನು ಹೀಗೆ ಚಿತ್ರಿಸಿದ್ದೇನೆ, ಅವರ ಪೀಠಗಳನ್ನು ಹೀಗಿ ಚಿತ್ರಿಸಿದ್ದೇನೆ” ಎನ್ನುತ್ತ ಆ ಚಿತ್ರವನ್ನು ವರ್ಣಿಸಿದರು. ಅನಂತರ “ಈ ಚಿತ್ರವನ್ನು ಬಿಡಿಸಿದ ಮೇಲೆ, ಇದನ್ನು ತೆಗೆದುಕೊಂಡು ಹೋಗಲು ಅವರನ್ನು ಕರೆದೆ. ಅವರು ಬಂದು ನೋಡಿ, ‘ವರ್ಮರೇ, ಈ ಚಿತ್ರ ಚೆನ್ನಾಗಿ ಮೂಡಿದೆ. ಆದರೆ ನಾವು ನಮ್ಮ ಪ್ರದೇಶದಲ್ಲಿ ಹೆಣ್ಣು ದೇವರನ್ನಾಗಲಿ ಅಥವಾ ಹೆಣ್ಣನ್ನಾಗಲಿ ಮುಸುಕಿಲ್ಲದೆ ಚಿತ್ರಿಸುವುದಿಲ್ಲ, ನೋಡುವುದಿಲ್ಲ. ಹಾಗಾಗಿ, ಈ ಸರಸ್ವತೀ-ಲಕ್ಷ್ಮೀಯರಿಗೆ ಒಂದು ಪರದೆಯನ್ನು ಮೂಡಿಸಿ ಕೋಡಿ. ಅವರ ಮುಖವು ಹೆಚ್ಚು ಗೋಚರವಾಗಬಾರದು’ ಎಂದರು. ನಾನು ಅವಾಕ್ಕಾದೆ. ‘ನಾನು ದೇವರನ್ನು ಹಾಗೆ ಚಿತ್ರಿಸಲಾರೆ ಎಂದೆ. ಮುಖಭಾವದಲ್ಲೇ ಅಲ್ಲವೇ ಸಾತ್ತ್ವಿಕತೆ ಮೂಡುವುದು?! ಅದಕ್ಕೆ ಪರದೆ ಹಾಕಿದರೆ ಮತ್ತಿನ್ನೇನು ತಾನೆ ತೋರೀತು’ ಎಂದೆ. ಆದರೆ ಅವರು ಒಪ್ಪಲಿಲ್ಲ. ‘ನೀವು ಹಾಗೆ ಮಾಡಲಿಲ್ಲವೆಂದರೆ ನಾವು ಈ ಚಿತ್ರವನ್ನು ಕೊಳ್ಳಲಾಗುವುದಿಲ್ಲ, ನಿಮಗೆ ಹಣವನ್ನೂ ಕೊಡುವುದಿಲ್ಲ’ ಎಂದರು. ಅದಕ್ಕೆ ನಾನು ‘ಸ್ವಾಮಿ, ನಿಮ್ಮ ಹಣ ನಿಮ್ಮ ಹತ್ತಿರವೇ ಉಳಿಯಲಿ, ನನ್ನ ಚಿತ್ರ ನನ್ನ ಬಳಿಯೇ ಇರಲಿ’ ಎಂದೆ. ಅದಾದ ಮೇಲೆ ಅವರು ‘ನಿಮ್ಮ ಈ ತೀರ್ಮಾನದಿಂದ ಮುಂದೆ ಬರುಬಹುದಾದ ಇನ್ನೂ ಅನೇಕ ಕೋರಿಕೆಗಳು ನೀವು ಕಳೆದುಕೊಳ್ಳಬಹುದು’ ಎಂದರು. ನಾನು ಯೋಚನೆ ಮಾಡಿದೆ. ಅವರು ಮತ್ತೂ ಹಲವು ಚಿತ್ರಗಳನ್ನು ಬಿಡಿಸಲು ಹೇಳಿದರೆ, ಅದರಲ್ಲೂ ಇಂತಹ ಪರದೆಯನ್ನೇ ಬಯಸುವವರು. ಹಾಗೆ ಆತ್ಮತೃಪ್ತಿಯಿಲ್ಲದೆ ಚಿತ್ರಿಸುವುದಕ್ಕಿಂತ, ಅಂತಹ ಚಿತ್ರಗಳನ್ನು ಮೂಡಿಸದಿರುವುದೇ ಲೇಸು ಎನ್ನಿಸಿ ಅವರ ಕೋರಿಕೆಯನ್ನು ತಿರಸ್ಕರಿಸಿದೆ” ಎನ್ನುತ್ತ ಆ ಚಿತ್ರವನ್ನು ತೋರಿಸಿದರು.

ಇದರಿಂದ ವರ್ಮರಿಗೆ ಸಹಜವಾಗಿರುವ ಭಗವತ್ಪ್ರೀತಿ, ಕೆಲಸದಲ್ಲಿ ಅವರಿಗಿರುವ ನಿಷ್ಠೆ, ಔಚಿತ್ಯಪ್ರಜ್ಞೆ, ಅಭಿಜಾತ ಕಲೆಗೂ ವ್ಯಾವಹಾರಿಕತೆಗೂ ಇರುವ ವೈರುದ್ಧ್ಯ - ಎಲ್ಲವೂ ಒಮ್ಮೆಲೇ ತಿಳಿದಂತಾಯಿತು.

ಆಗ ತಾನೆ ಪೂರ್ಣವಾಗಿರುವ, ಅಥವಾ ಪೂರ್ಣವಾಗಿದೆಯೆಂದು ನನಗೆನಿಸಿದ ಯಶೋದಾ-ಕೃಷ್ಣರ ಚಿತ್ರವೊಂದು ನಮ್ಮೆಲ್ಲರ ಗಮನಸೆಳೆಯಿತು. ಆ ಚಿತ್ರ ಅಸಾಮಾನ್ಯವಾಗಿತ್ತು. ಬಂಗಾರದ ಅಂಚಿನ, ಕನಾಕಾಂಬರ ಹೂವನ್ನು ಹೋಲುವ ನೀಳವಾದ ಕೆಂಪು ಸೀರೆಯನ್ನುಟ್ಟ ಯಶೋದೆ, ಬಾಲಕೃಷ್ಣನನ್ನು ತನ್ನ ಬದಿಯಲ್ಲಿ ನಿಲ್ಲಿಸಿಕೊಂಡು, ಅವರಿಬ್ಬರ ಗಲ್ಲವು ಬೆಸೆದು, ತಾಯಿ-ಮಕ್ಕಳ ಪ್ರೀತಿಯಲ್ಲಿ ಕರಗಿಹೋಗಿರುವ ಮುಖಭಾವವನ್ನು ತೋರುತ್ತ, ಕಣ್ಣುಗಳು ಅರ್ಧನಿಮೀಲಿತವಾಗಿ ಚಿತ್ರಿತವಾಗಿದೆ.

ಕೃಷ್ಣನಿಗೆ ಆಭರಣಗಳ ಅಲಂಕಾರವಿದ್ದರೂ, ವರ್ಮರು ಆತನಿಗೆ ಬಟ್ಟೆಯ ಸೋಂಕಿಲ್ಲದಂತೆ ಮಾಡಿ ಪರಿಪೂರ್ಣತೆಯನ್ನು ತಂದುಕೊಟ್ಟಿದ್ದರು. ಗುಂಗುರುಕೂದಲು, ಹಣೆಯ ಮೇಲಿಳಿದ ಮುಂಗುರುಳು, ತುಂಬುಗೆನ್ನೆ, ಹೊಳೆಯುವ ತುಟಿಗಳು, ಎಳೆಮಕ್ಕಳಿಗಿರುವ ಬೆಣ್ಣೆಬೊಜ್ಜು, ಅಮ್ಮನನ್ನು ಮುದ್ದುಮಾಡಲೆಂದು ಯಶೋದೆಯ ಕೆನ್ನೆಯನ್ನು ಸವರುತ್ತಿರುವ ಪುಟ್ಟ ಕೈಗಳು, ಗುಲಾಬಿಬಣ್ಣದ ಪಾದಗಳು ಬಾಲಕೃಷ್ಣನನ್ನು ಸಮ್ಮೋಹಕವಾಗಿ ಮೂಡಿಸಿವೆ. ಬಲಗೈಯಲ್ಲಿ ಮಗನನ್ನು ಹಿಡಿದ ಯಶೋದೆ ಎಡಗೈಯಲ್ಲಿ ಬೆಣ್ಣೆಯ ಬಟ್ಟಲನ್ನು ಹಿಡಿದಿದ್ದರೂ, ಅದರ ಮೇಲಿನ ಹಿಡಿತ ಸಡಿಲವಾಗಿರುವಂತೆ ಚಿತ್ರಿತವಾಗಿದೆ.

ಇನ್ನು ಯಶೋದೆಯ ಸೀರೆಯ ನೆರಿಗೆ, ತುರುಬು, ಆಭರಣಗಳು, ಮುಡಿದಿರುವ ಮಲ್ಲಿಗೆ ಕನಕಾಂಬರ ಹೂಗಳು, ಮಂತಾದವು ಯಶೋದೆಯನ್ನು ಆಕರ್ಷಕವಾಗಿ ಮೂಡಿಸಿವೆ. ಶಾಶ್ವತವಾಗಿ ಸಹೃದಯರ ಮನಸ್ಸಿನಲ್ಲಿ ನೆಲೆಸಲು ಇವರಿಬ್ಬರ ಚಿತ್ರವೇ ಸಾಕು. ಆದರೆ ಅಷ್ಟು ಮಾಡಿದರೆ ಅದು ವರ್ಮರ ಚಿತ್ರವಾಗುವುದೇ?

ನೈಪಥ್ಯದಲ್ಲಿ ಯಶೋದೆಯ ಮನೆಯ ಒಳಾಂಗಣವನ್ನು ಭಾಗಾಂಶವಾಗಿ ಚಿತ್ರಿಸಿ, ಇವರಿಬ್ಬರ ಹಿಂದೆ ಒಂದು ಹಸು ಮತ್ತು ಆಕಳ ಕಂಚಿನ ಪ್ರತಿಮೆಯನ್ನು ಚಿತ್ರಿಸಿದ್ದಾರೆ. ಆ ಪ್ರತಿಮೆಯಲ್ಲಿ ಆಕಳು ಹಸುವಿನ ಕೆಚ್ಚಲಿಗೆ ಬಾಯಿಹಾಕಿದರೆ, ಹಸು ಆಕಳ ಮೈಯನ್ನು ನೆಕ್ಕುತ್ತಿದೆ. ಅದರ ಹಿಂಬದಿಗೆ ಒಂದು ಕಿಟಕಿ, ಆ ಕಿಟಕಿಗೊಂದು ಪ್ರಭಾವಳಿ, ಆ ಪ್ರಭಾವಳಿಯಲ್ಲಿ – ಹಸು, ಮತ್ತು ಬೆಣ್ಣೆಯನ್ನು ಸೋರಿಸುತ್ತಿರುವ ಮಡಿಕೆ – ಇವುಗಳ ಚಿತ್ರಸರಣಿಯನ್ನ ಮೂಡಿಸಿ, ವಾತ್ಸಲ್ಯದ ಮಹಾಪೂರವನ್ನೇ ವರ್ಣಿಸಿದ್ದಾರೆ. ಕಿಟಕಿಯ ಹೊರಗೆ ಕೃಷ್ಣನನ್ನು ಕಾಯುತ್ತಿರುವ ಗೊಲ್ಲರು, ಒಂದು ಹಸುವನ್ನೂ ಎಳೆದು ತಂದು, ಮರೆಯಲ್ಲಿ ನಿಂತು ಕಿಟಕಿಯಿಂದ ಕೃಷ್ಣ-ಯಶೋದೆಯರನ್ನು ನೋಡುತ್ತ ನಿಂತಿರುವುದು ತಿಳಿಯಾಗಿದ್ದರೂ ಧ್ವನಿಗರ್ಭಿತವಾಗಿ ಚಿತ್ರಿತವಾಗಿದೆ.

ಇದನ್ನು ನೋಡುತ್ತಲೇ ಮನಸ್ಸೋತ ನಾನು ಮತ್ತು ವಾಸುಕಿ ವರ್ಮರಿಗೆ ಅಭಿನಂದಿಸಿದೆವು. ಮೇಲೆ ಹೇಳಿದ ಸ್ವಾರಸ್ಯಗಳನ್ನು ಒಂದೊಂದಾಗಿ ನಾವು ವಾಚ್ಯವಾಗಿಸುತ್ತಿದ್ದಂತೆ ವರ್ಮರು ಸಂತೋಷದಿಂದ ನಾಚಿ, ತಲೆ ಕೆಳಗೆ ಮಾಡಿ, ಮಂದಹಾಸ ಸೂಸುತ್ತ ಕುಳಿತರು. “ನೀವೆಲ್ಲ ಇಷ್ಟು ಗಮನವಿಟ್ಟು ನೋಡಿ ಮೆಚ್ಚುವುದೇ ನನಗೆ ಸಂತೋಷ” ಎಂದರು.

ನಾನು ಇದರ ಪ್ರತಿಯನ್ನು ಕೊಳ್ಳುವೆ ಎಂದೊಡನೆ ವರ್ಮರು, “ಹಾ, ಆಗಬಹುದು. ಈ ಚಿತ್ರ ಸಂಪೂರ್ಣವಾದ ಮೇಲೆ ಕಳುಹಿಸಿಕೊಡುವೆ” ಎಂದರು. ನಾನು ಮತ್ತು ವಾಸುಕಿ ಒಬ್ಬರನ್ನೊಬ್ಬರು ನೋಡಿಕೊಂಡು, “ಇದರಲ್ಲಿ ಇನ್ನೂ ಪೂರ್ಣ ಮಾಡಬೇಕಾಗಿರುವುದು ಏನಿದೆ ಸರ್?” ಎಂದೆವು. ಅವರು ಅಷ್ಟೇ ಪ್ರಾಮಾಣಿಕತೆಯಿಂದ “ಇಲ್ಲ, ಇದರಲ್ಲಿ ಇನ್ನೂ ಚಿತ್ರಿಸಬೇಕು. ಅದೋ ನೋಡಿ, ಯಶೋದೆಯ ಸೀರೆಯ ಅಂಚಿನ ನೆರಿಗೆಯ ನೆರಳನ್ನು ಚಿತ್ರಿಸಿಲ್ಲ. ಕಿಟಕಿಯ ಹೊರಗೆ ಸಂಧ್ಯಾಕಾಲದ ಬೆಳಕನ್ನು ಮೂಡಿಸಿಲ್ಲ. ಪ್ರಭಾವಳಿಯ ರೇಖೆಗಳು ತುಂಬ ತಿಳಿಯಾಗಿವೆ. ಹಾಗಾಗಿ, ಇನ್ನೂ ಒಂದು ವಾರದ ಕೆಲಸವಿದೆ” ಎಂದರು. ಆಗ ನಮಗೆ ವರ್ಮರ ‘attention to detail' ನ ಸಾಕ್ಷಾತ್ಕಾರವಾಯಿತು.

ಮಾತುಕತೆ ನಡೆಯುವಾಗ ಸಿಹಿತಂಡಿಗಳನ್ನು (ರಸೊಗುಲ್ಲ) ತರಿಸಿದರು. ಇದೆಲ್ಲಾ ಏತಕ್ಕೆ ಎಂದಿದ್ದಕ್ಕೆ ನನ್ನ ಮಗಳ ಕಡೆ ಕೈ ತೋರಿಸಿದರು. ನನ್ನ ಮಗಳು ರಸೊಗುಲ್ಲವನ್ನು ಮುಟ್ಟಲೂ ಇಲ್ಲ. ನಾವೆಲ್ಲರೂ ಅವಳ ಹೆಸರು ಹೇಳಿ ತಿಂದಿದ್ದಾಗಿತ್ತು. ಮತ್ತೊಂದು ರಸೊಗುಲ್ಲವನ್ನು ವರ್ಮರು ತಮ್ಮ ಬಟ್ಟಲಲ್ಲಿ ಹಾಕಿಕೊಂಡಾಗ, ವಾಸುಕಿ ಅವರ ಭುಜದ ಮೇಲೆ ಕೈಯೂರಿ, “ಸರ್, ನಿಮಗೆ ರಸೊಗುಲ್ಲ ಇಷ್ಟಾಂತ ತರಸಿದಿರಾ? ಮಗು ಪಾಪ ಒಂದೂ ತಿಂದಿಲ್ಲ ನೋಡಿ” ಎನ್ನುತ್ತ ಛುಡಾಯಿಸಿದರೆ, ಚಿಕ್ಕ ಮಗುವಿನಂತೆ “ಹೌದು” ಎಂದು ತಲೆಯಲ್ಲಾಡಿಸುತ್ತ, ಸಿಕ್ಕಿಬಿದ್ದೆನೆಂಬಂತೆ ವಾಸುಕಿಯನ್ನೊಮ್ಮೆ ನೋಡಿ, ತಲೆ ಕೆಳಗೆ ಮಾಡಿ ನಗುತ್ತ ರಸೊಗುಲ್ಲದ ಒಂದು ತುಂಡನ್ನು ಮುರಿದು ತಿಂದರು.

ಅಲ್ಲಿದ್ದ ನಮ್ಮ ಮೂವರಿಗೂ ಇದ್ದ ಸಮಾನತಂತು ಶತಾವಧಾನಿ ಗಣೇಶರು. ಹಾಗಾಗಿ ಮುಂದೆ ಮಾತು ರಾ. ಗಣೇಶರ ಬಗೆಗೆ ತಿರುಗಿತು. ಅವರ ಜೊತೆಗೂಡಿ ವರ್ಮರು ಮಾಡಿದ ಕಾವ್ಯ-ಚಿತ್ರ, ಕಾವ್ಯ-ಚಿತ್ರ-ಗೀತ-ನೃತ್ಯ ಕಾರ್ಯಕ್ರಮಗಳು ನಮ್ಮ ಮಾತಿನ ವಿಷಯವಾದವು. ಆ ಹಲವು ಕಾರ್ಯಕ್ರಮಗಳನ್ನು ನೆನೆಯುತ್ತ, ರಾಷ್ಟ್ರೋತ್ಥಾನ ಸಂಸ್ಥೆಯಲ್ಲಿ ಇಪ್ಪತ್ತನಾಲ್ಕು ಘಂಟೆಗಳ ಕಾಲ ಸತತವಾಗಿ ಪ್ರದರ್ಶಿಸಿದ ಕಾವ್ಯ-ಚಿತ್ರವು ವಿಶ್ವ ದಾಖಲೆಯನ್ನು ಮೂಡಿಸಿದ್ದನ್ನು ಸ್ಮರಿಸಿಕೊಂಡರು.

ಅದನ್ನು ನೆನೆಯುತ್ತ, “ನೋಡಿ ಕಶ್ಯಪರೆ, ಅವತ್ತು ೨೪ ಘಂಟೆಯ ದಾಖಲೆಯಾಗಿ ನನ್ನನ್ನು ಮತ್ತು ಗಣೇಶರನ್ನು ವೇದಿಕೆಯ ಮೇಲೆ ಸನ್ಮಾನಿಸಿದರು. ತುಂಬ ಜನ ಸೇರಿದ್ದರು. ಜನರ ಚಪ್ಪಾಳೆಯೇ ನಿಲ್ಲಲಿಲ್ಲ. ನಮಗೆ ಶಾಲನ್ನು ಹೊದಿಸಿ, ಸನ್ಮಾನ ಮಾಡಿ, ಕಾಣಿಕೆಯಾಗಿ ಕೆಲವು ಖಲ್ಲತ್ತುಗಳನ್ನು ಕೊಟ್ಟರು. ಅದಾದ ಮೇಲೆ ನಾನು ಮತ್ತು ಗಣೇಶರು ಉಪಾಹಾರಕ್ಕಾಗಿ ಹೊರಗೆ ಹೋಗಬೇಕಿತ್ತು. ನಾನು ನನಗೆ ಕೊಟ್ಟ ಸನ್ಮಾನದ ಕಾಣಿಕೆಯನ್ನು, ಪ್ರಶಂಸಾಪತ್ರವನ್ನು ನೋಡಿ ಆನಂದಿಸುವಷ್ಟರಲ್ಲಿ, ಗಣೇಶರು ಅವನ್ನು ಯಾವುದೋ ಒಂದು ಮೂಲೆಯಲ್ಲಿ ಇಟ್ಟು, ‘ಬನ್ನಿ ಬನ್ನಿ’ ಎನ್ನುತ್ತ ಸನ್ಮಾನ-ಕಾಣಿಕೆಗಳ ಪರಿವೇ ಇಲ್ಲದಂತೆ ಹೊರಕ್ಕೆ ನಡೆದರು.

ಆಗ ನನಗೆ ಅನ್ನಿಸಿತು. ಛೇ, ಏನಪ್ಪ ಈ ಮನುಷ್ಯ ಇಷ್ಟು ಸರಳ; ಈ ಮಟ್ಟಿಗೆ ಸನ್ಮಾನ-ಪ್ರಶಸ್ತಿಗಳಿಗೆ ವಿಮುಖ ಅಂತ. ನಾನಿನ್ನೂ ನನ್ನ ಸಾಧನೆಗಳನ್ನು ಸವಿಯುವ ಸ್ಥಿತಿಯಲ್ಲಿದ್ದಾಗಲೇ ಗಣೇಶರು ಅದರಿಂದ ಹೊರಕ್ಕೆ ಬಂದಿದ್ದರು. ಅವರು ತುಂಬ ದೊಡ್ಡ ಮನುಷ್ಯ ಸರ್. ನಾನು ಅವರಂತೆ ಆಗಲೇ ಇಲ್ಲ” ಎಂದರು.

ವರ್ಮರ ಸರಳತೆಯ ಬಗೆಗೆ ವಾಸುಕಿ ಸಂಭಾಷಣೆಗನುಗುಣವಾಗಿ ಹೇಳತೊಡಗಿದರೆ, ಅದೆಲ್ಲವೂ ನಗಣ್ಯವೆಂಬಂತೆ ಬದಿಗಿಟ್ಟು, ಕಲಾವಿದ ತನ್ನ ಅಹಂಕಾರವನ್ನು ತೊರೆದು ಬಂದಾಗ ಮಾತ್ರ ಕಲಾನಿರ್ಮಾಣ ಸಾಧ್ಯವೆಂಬ ತಿರುಳನ್ನು ಹಲವು ಮಾತುಗಳಲ್ಲಿ ಸಾರಿದರು.

ವಾಸುಕಿ ನನ್ನನ್ನು ಅವರಿಗೆ ಪರಿಚಯಿಸುವಾಗ ನಾನು ಗಾಯಕನೆಂಬದನ್ನು ಅವರಿಗೆ ಹೇಳಿದ್ದರು. ನಾವು ಅವರ ಹಲವು ಚಿತ್ರಗಳನ್ನೆಲ್ಲ ನೋಡಿ ಮಾತನಾಡಿದ ಬಳಿಕ, ವರ್ಮರು ಅತಿವಿನಮ್ರತೆಯಿಂದ ಮೆಲ್ಲನೆಯ ದನಿಯಲ್ಲಿ (ಅವರು ಮಾತನಾಡುತ್ತಿದ್ದುದ್ದೇ ಮೆಲುದನಿಯಲ್ಲಿ) “ಕಶ್ಯಪರೇ, ನೀವು ಗಾಯಕರು ಅಂತ ವಾಸುಕಿ ಹೇಳಿದರು. ನನಗೆ ಸಂಗೀತ ಅಂದರೆ ತುಂಬ ಇಷ್ಟ. ನಾನು ಚಿತ್ರ ಬಿಡಿಸುವಾಗ ಮೆಲ್ಲಗೆ ಸಂಗೀತ ಟೇಪ್ ರೆಕಾರ್ಡರ್‌ನಲ್ಲಿ ನುಡಿಯುತ್ತಲೇ ಇರುತ್ತೆ. ನಿಮ್ಮ ಸಂಗೀತವನ್ನು ಯಾವುದಾದರೂ ಕಛೇರಿಯಲ್ಲಿ ಕೇಳಬೇಕು. ಆದರೆ ಸದ್ಯಕ್ಕೆ, ನೀವು ತಪ್ಪು ತಿಳಿಯದೇ ಇದ್ದರೆ, ಒಂದು ಹಾಡನ್ನು ಹಾಡುತ್ತೀರಾ?” ಎಂದು ವಿನಂತಿಸಿಕೊಂಡರು.

ನಾನು “ಅಯ್ಯೋ ಸರ್, ಒಂದು ಹಾಡಿಗಾಗಿ ನೀವು ಇಷ್ಟು ಕೇಳಿಕೊಳ್ಳಬೇಕೆ? ನಿಮ್ಮ ಮುಂದೆ ಹಾಡುವುದು ನನ್ನ ಭಾಗ್ಯ” ಎನ್ನುತ್ತ ಯಾವ ಹಾಡು ಹೇಳೆಲೆಂದು ಕೇಳಿದೆ. ಯಾವುದೂ ಆದೀತು ಎಂದರು. ಆಗಷ್ಟೇ ಯಶೋದಾ-ಕೃಷ್ಣರ ಚಿತ್ರವನ್ನು ನೋಡಿ ಆನಂದಿಸಿ, ಅದರ ಮುಂದೆಯೇ ಕುಳಿತಿದ್ದೆವು. ನಾನು ಅವರಿಗೆ “ಕಣ್ಣ ಮುಂದೆ ಬಾಲಕೃಷ್ಣನಿದ್ದಾನೆ. ಆ ಕೃಷ್ಣನದ್ದೇ ಒಂದು ದಾಸರ ಪದ ಆದೀತೇ?” ಎಂದು ಕೇಳಿದೆ. ಆಗಬಹುದು ಎಂದರು. ನಾನು ನನ್ನ ಮೊಬೈಲ್ ಫೋನ್‌ನಲ್ಲಿ ತಂಬೂರಿಯ ಶ್ರುತಿಯನ್ನು ನುಡಿಸುವಷ್ಟರಲ್ಲಿ, ಅವರ ಶಿಷ್ಯ ರವೀಂದ್ರರನ್ನು ಕರೆದು, “ಸ್ವಲ್ಪ ನನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಪ್ಪ” ಎಂದರು.

ಪುರಂದರದಾಸರ “ಅಂಬೆಗಾಲಿಕ್ಕುತಲಿ ಬಂದ ಗೋವಿಂದ” ಎಂಬ ಯಮನ್ ರಾಗದ ಒಂದು ದಾಸರಪದವನ್ನು ಹಾಡಿದೆ. ನಾನು ಹಾಡುವಾಗ ನನ್ನ ಎಡಕ್ಕೆ ವರ್ಮರು ಕೈಕಟ್ಟಿ ಕುಳಿತು ತದೇಕಚಿತ್ತದಿಂದ ಆಲಿಸಿದರು. ಆ ಹಾಡನ್ನು ಕೇಳಿದ ಮೇಲೆ ವರ್ಮರು, “ಕಶ್ಯಪರೇ, ನೀವು ತುಂಬ ಚೆನ್ನಾಗಿ ಹಾಡಿದಿರಿ. ಎಂತಹ ಒಳ್ಳೆಯ ದಾಸರಪದ. ನೀವು ಹಾಡುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಒಂದು ಚಿತ್ರ ಮೂಡಿತು – ಅರ್ಧನಿಮೀಲಿತರಾದ ಪುರಂದರದಾಸರು ತಮ್ಮ ಎರಡೂ ಕೈಗಳನ್ನು ಒಡ್ಡಿ ಕೃಷ್ಣನನ್ನು ಕರೆಯುತ್ತಿದ್ದಾರೆ. ಬಾಲಕೃಷ್ಣ ಅಂಬೆಗಾಲನ್ನು ಹಾಕುತ್ತ ದಾಸರ ಮನೆಯ ಬಾಗಿಲಿನೊಳಕ್ಕೆ ಬರುತ್ತಿದ್ದಾನೆ. ಈ ಚಿತ್ರ ಇನ್ನೂ ಕಲ್ಪನೆಯನ್ನು ತಾಳುತ್ತ ಇದೆ” ಎಂದರು. ಆಗ ನಾನು “ಸರ್, ಆ ಹಾಡಿನಲ್ಲಿ ಎರಡು ಚರಣಗಳನ್ನು ನೀವು ಕೇಳಿದಿರಿ. ಪ್ರತಿಯೊಂದು ಚರಣದಲ್ಲೂ ಒಂದೊಂದು ಅವತಾರವನ್ನು ದಾಸರು ವರ್ಣಿಸಿದ್ದಾರೆ. ನೋಡಿ:

ಜಲಚರ (ಮತ್ಸ್ಯ), ಜಲವಾಸ (ಕೂರ್ಮ), ಧರಣಿಧರ (ವರಹ), ಮೃಗರೂಪ (ನಾರಸಿಂಹ)

ನೆಲನಳೆದು ಮೂರಡಿ ಮಾಡಿಬಂದ (ವಾಮನ)

ಕುಲನಾಶ (ಪರಶುರಾಮ) ವನವಾಸ (ರಾಮ) ನವನೀತ ಚೋರನಿವ (ಕೃಷ್ಣ)

ಲಲನೆಯರ ವ್ರತಭಂಗ (ಬುದ್ಧ), ವಾಹನತುರಂಗ (ಕಲ್ಕಿ),”

ಎನ್ನುತ್ತ ಹಾಡನ್ನು ಮತ್ತೊಮ್ಮೆ ಬಿಡಿಸಿ ಹೇಳಿ, ಅದರಂತೆಯೇ ಮತ್ತೊಂದು ಚರಣವೆಂದು ಹೇಳಿದೆ. ಆಗ ವರ್ಮರು ಕಣ್ಣುಮುಚ್ಚಿ, ತಮ್ಮ ಮನಸ್ಸಿನಲ್ಲಿಯೇ ಕುಂಚವೊಂದನ್ನು ಹಿಡಿದವರಂತೆ “ಹಾ! ಹಾ! ಆಗಲಿ, ಒಂದು ಕೆಲಸ ಮಾಡೋಣ. ದಾಸರ ಮನೆಯ ಬಾಗಿಲಿನ ಪ್ರಭಾವಳಿಯಲ್ಲಿ ದಶಾವತಾರಗಳ ಚಿತ್ರವನ್ನು ಬಿಡಿಸೋಣ” ಎಂದರು.

ವರ್ಮರ ಕಲಾನಿರ್ಮಾಣದ ಪದರಗಳು ತೆರೆದುಕೊಳ್ಳುತ್ತಿರುವುದನ್ನು ನಾನು ಮತ್ತು ವಾಸುಕಿ ಪ್ರತ್ಯಕ್ಷವಾಗಿ ಅನುಭವಿಸಿದೆವು. ಅನಂತರ ನಾವು ಅವರನ್ನು, ಅವರ ಚಿತ್ರಗಳನ್ನು ಕೊಂಡಾಡಿ ಅವರಿಂದ ಬೀಳ್ಕೊಂಡೆವು.

ಮಾರನೆಯ ದಿನ ಮಧ್ಯಾಹ್ನದ ವೇಳೆಗೆ ವರ್ಮರ ಕರೆ ಬಂತು. ಕುಶಲೋಪರಿಯ ಮುನ್ನವೇ ಅವರು “ನೆನ್ನೆ ನೀವು ಹಾಡಿದ ಹಾಡು ನನ್ನ ಹೃದಯ ಮುಟ್ಟಿದೆ. ತುಂಬ ಇಷ್ಟವಾಯಿತು. ಪುಣ್ಯಕ್ಕೆ ರೆಕಾರ್ಡಿಂಗ್ ಮಾಡಿದ್ದರಿಂದ ನಾನು ಮೂರು ಬಾರಿ ಮತ್ತೆ ಕೇಳಿದ್ದೇನೆ. ನನ್ನ ಮನೆಯವರಿಗೂ ಕೇಳಿಸಿದ್ದೇನೆ. ಆಕೆಗೂ ಇಷ್ಟವಾಯಿತು” ಎಂದರು.

ನಾನು ಧನ್ಯವಾದ ಹೇಳುವ ಮೊದಲೇ ಅವರು ಮುಂದುವರಿಸಿದರು, “ನಾನು ನೆನ್ನೆ ನಿಮಗೆ ಹೇಳಿದ ಪುರಂದರದಾಸರ ಚಿತ್ರ ಈಗ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಅರ್ಧನಿಮೀಲಿತರಾದ ದಾಸರು ಕೃಷ್ಣನನ್ನು ಕರೆಯುತ್ತಿದ್ದಾರೆ. ಕೃಷ್ಣ ಅಂಬೆಗಾಲಿಕ್ಕುತ್ತ ಇವರ ಹತ್ತಿರ ಬರುತ್ತಿದ್ದಾನೆ. ನೋಡಿ, ನಾನು ನೆನ್ನೆಯಿಂದ ಯೋಚಿಸುತ್ತಿದ್ದೇನೆ – ಪುರಂದರದಾಸರು ತಮ್ಮ ಮನೆಗೆ ಕೃಷ್ಣನನ್ನು ಕರೆಯಲು, ದಾಸರ ಮನೆ ಯಾವುದು? ಅಂತ” ಎಂದರು.

ನಾನು ಆ ಪ್ರಶ್ನೆಗೆ ಉತ್ತರವನ್ನು ಯೋಚಿಸುತ್ತಿರುವಾಗಲೇ ಅವರು, “ಬಹಳಷ್ಟು ಯೋಚಿಸಿದ ಮೇಲೆ ನನಗೆ ಒಂದು ಕಲ್ಪನೆ ಈಗ ಮೂಡಿದೆ. ದಾಸರ ಎದೆಯಲ್ಲಿಯೇ ಬಾಗಿಲನ್ನು ಚಿತ್ರಿಸಿ, ಅದರೊಳಗೆ ಕೃಷ್ಣ ಅಂಬೆಗಾಲಿಕ್ಕುತ್ತ ಒಳಗೆ ನಡೆಯುವಂತೆ ಚಿತ್ರಿಸಬುಹುದು. ದಾಸರ ಮನೆ ಇನ್ನಾವುದು? ಅವರ ಅಂತರಂಗವೇ ಅಲ್ಲವೇ?” ಎಂದಾಗ ನನಗೆ ರಸೋತ್ಕರ್ಷವಾಗಿತ್ತು. “ಆಹಾ! ನಿಮ್ಮ ಕಲ್ಪನೆಯ ಸೊಗಸೇ ಸೊಗಸು ಸರ್” ಎಂದು ಉದ್ಗರಿಸಿದೆ. “ಅದಕ್ಕೆ ಕಾರಣ ನಿಮ್ಮ ಹಾಡು. ಹಾಗಾಗಿ ನಿಮ್ಮಲ್ಲಿ ಹಂಚಿಕೊಳ್ಳಲು ನಿಮಗೆ ಕರೆ ಮಾಡಿದೆ. ನಿಮ್ಮ ಒಪ್ಪಿಗೆಯಿದ್ದರೆ ನಾನು ಈ ಚಿತ್ರವನ್ನು ಬರೆಯುವೆ” ಎಂದರು.

ಆಗ ನನಗಾದ ಸಂಕೋಚ ಪ್ರಾಯಶಃ ನನ್ನ ಜನ್ಮದಲ್ಲೇ ಆಗಿಲ್ಲ. ನಾನು ಧಾವಿಸುವ ಧ್ವನಿಯಲ್ಲಿ “ಅಯ್ಯೋ ಸರ್, ನೀವು ಚಿತ್ರ ಬರೆಯುವುದಕ್ಕೆ ನನ್ನ ಒಪ್ಪಿಗೆಯೇ? ನಾನು ಈ ಹಾಡನ್ನು ನೂರಾರು ಮಂದಿಯ ಮುಂದೆ ಹಾಡಿರುವುದುಂಟು. ಯಾರಿಗೂ ಕಾಡದ ಪ್ರಶ್ನೆ ನಿಮಗೆ ಕಾಡಿತು, ಯಾರಿಗೂ ಮೂಡದ ಕಲ್ಪನೆ ನಿಮಗೆ ಮೂಡಿತು. ಅಷ್ಟಕ್ಕೂ ಇದರ ಕರ್ತೃ ಪುರಂದರದಾಸರು, ಹಾಡನ್ನು ಹೇಳಿಕೊಟ್ಟವರು ನನ್ನ ಗುರು ಶಂಕರ ಶಾನುಭಾಗರು. ನಾನು ಬರಿಯ ಹಾಡುಗಾರ. ಸಂಗೀತಸಂಯೋಜನೆಯೂ ನನ್ನದಲ್ಲ. ಇನ್ನು ನನ್ನ ಒಪ್ಪಿಗೆಯ ಪ್ರಶ್ನೆ ಎಲ್ಲಿಂದ ಬರುವುದು? ಅಷ್ಟಕ್ಕೂ ನಾನು ತುಂಬ ಚಿಕ್ಕವನು ಸರ್. ನಿಮ್ಮಂತಹ ದೊಡ್ಡ ಕಲಾವಿದರ ಮುಂದೆ ನನ್ನ ಎಣಿಕೆ ಏನು?” ಎಂದು ನನ್ನ ಸಂಕೋಚವನ್ನು ವ್ಯಕ್ತಪಡಿಸಿದೆ. “ಛೇ ಛೇ ... ಹಾಗೆಲ್ಲ ಹೇಳಬೇಡಿ. ಕಲಾವಿದರಲ್ಲಿ ಚಿಕ್ಕವರು ದೊಡ್ಡವರು ಅಂತೆಲ್ಲಾ ಇಲ್ಲ. ನಾನು ಕುವೆಂಪು ಅವರನ್ನು ಕಂಡ ಒಂದು ಕತೆಯನ್ನು ಹೇಳುತ್ತೇನೆ ಕೇಳಿ” ಎಂದು ಒಂದು ಉಪಕಥೆಯನ್ನು ಹೇಳತೊಡಗಿದರು.

ಕುವೆಂಪು ಭೇಟಿ

ವರ್ಮರು ಕುವೆಂಪು ಅವರನ್ನು ಹಲವು ದಶಕಗಳ ಮುಂಚೆ ಕಂಡಿದ್ದಾಗ ತಮ್ಮ ಚಿತ್ರಗಳನ್ನು ತೋರಿಸಿದ್ದರಂತೆ. ಕುವೆಂಪು ಅವರು ವರ್ಮರನ್ನು ತುಂಬ ಹೊಗಳಿದಾಗ, ಸಹಜವಾಗಿಯೇ ನಾಚಿಕೆಯ ಸ್ವಭಾವದವರಾದ ವರ್ಮರು “ಸರ್, ನೀವು ದೊಡ್ಡ ಕವಿಗಳು, ನಾನೊಬ್ಬ ಚಿಕ್ಕ ಕಲಾವಿದ. ನಿಮ್ಮ ಮುಂದೆ ನಾನೇನೂ ಅಲ್ಲ. ನೀವಿಷ್ಟು ಹೊಗಳುವುದು ನನಗೆ ಮುಜುಗರವಾಗುತ್ತದೆ” ಎಂದರಂತೆ. ಆಗ ಕುವೆಂಪು “ನೋಡಪ್ಪ ವರ್ಮ, ಕಲಾವಿದರಲ್ಲಿ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ. ಕಲೆ ದೊಡ್ಡದು; ಕಲಾವಿದನಲ್ಲ. ಕಲೆ ಯಾವ ವ್ಯಕ್ತಿಯಲ್ಲಾದರೂ ಮೂಡಬಹುದು. ಯಾರಲ್ಲಿ ಮೂಡುತ್ತದೋ, ಅವರಿಗೆ ನಾವು ತಲೆಬಾಗಬೇಕು. ಮತ್ತೆ, ನೀನು ಹೇಳಿದೆಯಲ್ಲ, ದೊಡ್ಡವನು ಚಿಕ್ಕವನು ಅಂತ, ಅದು ಯಾವುದೂ ಎಣಿಕೆಗೆ ಬರುವುದಿಲ್ಲ. ನಾವೆಲ್ಲರೂ ಸಮುದ್ರದ ತೆರೆಗಳಿದ್ದಂತೆ. ಇಂದು ಮೇಲಿರುತ್ತೇವೆ, ನಾಳೆ ಕೆಳಗಿರುತ್ತೇವೆ. ಯಾವುದೋ ಜನ್ಮದಲ್ಲಿ ನೀನು ದೊಡ್ಡವನಾಗಿದ್ದೆ, ನಾನು ನಿನ್ನ ಮುಂದೆ ಕೈ ಮುಗಿದು ನಿಂತಿದ್ದೆ. ಈ ಜನ್ಮದಲ್ಲಿ ನನ್ನ ಮುಂದೆ ನೀನು ಕೈ ಕಟ್ಟಿಕೊಂಡು ನಿಂತಿರುವೆ. ಇದೇ ಜನ್ಮದಲ್ಲೇ ಮುಂದೊಂದು ದಿನ ನೀನು ದೊಡ್ಡ ಕಲಾವಿದನಾಗುವೆ. ನಿನ್ನ ಮುಂದೆ ಮತ್ತೊಬ್ಬ ಕಲಾವಿದನಾರೋ ಕೈಕಟ್ಟಿಕೊಂಡು ಬರುತ್ತಾನೆ. ಆಗ ನೀನು ಅವನ ಕಲೆಯನ್ನು ಮಾತ್ರ ನೋಡು. ಹಿರಿಯನೆಂದು ಹಿಗ್ಗಬೇಡ”.

ಈ ಪ್ರಸಂಗವನ್ನು ನನಗೆ ಹೇಳಿದ ವರ್ಮರು “ನೋಡಿ, ಇದು ಕುವೆಂಪು ಅವರ ಮಾತು, ನನ್ನದಲ್ಲ. ಅಂದಿನಿಂದ ಈ ಹೊತ್ತಿನವರೆಗೂ ನಾನು ಕಲಾವಿದನ ಶ್ರೇಣಿ, ಅಂತಸ್ತುಗಳನ್ನು ಕಾಣದೆ, ಆತನ ಕಲೆಯನ್ನು ನೋಡುತ್ತ ಬಂದಿದ್ದೇನೆ. ಹಾಗಾಗಿ, ನಾನು ಹಲವು ಕಿರಿಯ ಕಲಾವಿದರ ಒಳ್ಳೆಯ ಕಲೆಯನ್ನು ಕಂಡದ್ದಾಯಿತು, ಅವರಿಂದ ಸ್ಫೂರ್ತಿಯನ್ನು ಪಡೆಯಲೂ ಸಾಧ್ಯವಾಯಿತು. ನಮ್ಮ ಗಣೇಶರ ಸ್ವಭಾವವೂ ಹೀಗೇ ಅಲ್ಲವೇ? ನನಗೆ ನಿಮ್ಮ ಸಂಗೀತ ಹಿಡಿಸಿತು, ನನ್ನ ಹೃದಯಕ್ಕೆ ನಾಟಿತು. ಅಷ್ಟು ಸಾಕು. ನೀವು ಚಿಕ್ಕವರಾದರೆ ಏನೀಗ?” ಎಂದು ನನ್ನ ಬಾಯಿಕಟ್ಟಿಸಿದರು. “ಆಗಲಿ ಸರ್, ಆದರೂ ನನ್ನ ಒಪ್ಪಿಗೆ ಅಂತೆಲ್ಲ ಕೇಳಬೇಡಿ. ನನ್ನ ಹಾಡಿನಿಂದ ಸ್ಫೂರ್ತಿ ಪಡೆದು ನಿಮ್ಮಿಂದ ಒಂದು ಚಿತ್ರ ಹೊರಬರಲಿದೆ ಎಂದರೆ, ಅದಕ್ಕಿಂತ ಸಾರ್ಥಕತೆ ನನಗಿನ್ನೇನು!” ಎಂದೆ. 

“ಆಗಲಿ, ನಾನು ಸೀಸದಲ್ಲಿ ಒಮ್ಮೆ ಈ ಚಿತ್ರವನ್ನು ಬರೆದು, ನಿಮಗೆ ತೋರಿಸುವೆ. ನೀವು ನೋಡಿ ಒಪ್ಪಿಗೆಯನ್ನು ನೀಡಿ. ಅನಂತರ ನಮ್ಮ ವಾಸುಕಿಯವರಿಗೆ ತೋರಿಸುವೆ, ಅವರೂ ಒಪ್ಪಬೇಕು. ಆಮೇಲೆ ನಮ್ಮ ಗಣೇಶರಿಗೆ ತೋರಿಸುವೆ. ಅವರೂ ಒಪ್ಪಬೇಕು. ನಿಮಗೆ ಬೇಕಾದ ತಿದ್ದುಪಡಿಯನ್ನು ನೀವು ಹೇಳಿ. ಗಣೇಶರಂತೂ ಹೇಳಲೇಬೇಕು. ಅಷ್ಟಾದರೆ, ಇದು ಮುಂದೊಂದು ಒಳ್ಳೆಯ ಚಿತ್ರವಾಗಬಲ್ಲದು. ನನಗೆ ತಿಳಿದಂತೆ ಪುರಂದರದಾಸರ ಇಂತಹ ಚಿತ್ರ ಯಾವುದೂ ಇಲ್ಲ. ಈ ರೀತಿಯಲ್ಲಿ ಇದೇ ಮೊದಲನೆಯದಾಗುವುದು” ಎಂದರು.

ನನಗೊಂದು ಕುತೂಹಲ ಮೂಡಿತು. “ಸರ್, ನಿಮಗೆ ನಮ್ಮ ಮೂವರ ಒಪ್ಪಿಗೆ ಏಕೆ ಬೇಕು? ಗಣೇಶರು ಚಿತ್ರವನ್ನು ನೋಡಿ ಸಲಹೆ ನೀಡುವರೆಂದಾದ ಮೇಲೆ, ನಾನು ಮತ್ತು ವಾಸುಕಿ ಇನ್ನೇನು ಹೇಳಿಯೇವು?” ಎಂದು ಕೇಳಿದೆ.

ಆಗ ವರ್ಮರು ಮಾರ್ಮಿಕವಾದ ಉತ್ತರವನ್ನೇ ನೀಡಿದರು: “ಅದು ಹಾಗಲ್ಲ ಕಶ್ಯಪರೇ. ಯಾರ ಸಲಹೆಯಿಲ್ಲದೆಯೇ ನಾನು ಚಿತ್ರಿಸಬಲ್ಲೆ. ಆದರೆ ಅದು ತಪ್ಪಾಗುತ್ತದೆ. ನನಗೆ ಈ ಚಿತ್ರ ಹೊಳೆದದ್ದು ನಿಮ್ಮ ಹಾಡಿನಿಂದ, ನಿಮ್ಮನ್ನು ನನ್ನ ಮನೆಗೆ ಕರೆತಂದದ್ದು ವಾಸುಕಿ, ಮತ್ತೆ ನೀವಿಬ್ಬರೂ ನನಗೆ ಪರಿಚಯವಾಗಲು ಕಾರಣ ಗಣೇಶರು. ಹಾಗಾಗಿ ಚಿತ್ರಕ್ಕೆ ನಿಮ್ಮ ಮೂವರ ಋಣವೂ ಇರುತ್ತದೆ.”

‘ಋಣಪ್ರಜ್ಞೆ’ ಸನಾತನಧರ್ಮದ ಮೂಲತತ್ತ್ವಗಳಲ್ಲೊಂದು. ಕ್ರಮವಾಗಿ ‘ಋತ-ಋಣ-ಸತ್ಯ-ಧರ್ಮ’ ಎಂಬ ತತ್ತ್ವಗಳನ್ನು ಕಲಿಯುವುದು ಯುಕ್ತವಾದರೂ, ಸಂಸ್ಕರಣಗೊಂಡ ಹಿರಿಯರ ನಡೆಯಲ್ಲಿ ಇವನ್ನು ಕಾಣುವುದು ಬಲುಪಾಲಿಗೆ ಉತ್ತಮ. ವರ್ಮರು ಸನಾತನಧರ್ಮವನ್ನು ತಮ್ಮ ಜೀವನದ ಉಸಿರಂತೆ ಭಾವಿಸಿದ್ದರಿಂದ, ಅವರ ಕಲಾಕೃತಿಗಳು ನಮ್ಮ ಸಂಸ್ಕೃತಿಗೆ ಅಷ್ಟು ಅಂಟುಕೊಂಡಿವೆ. ಅವರ ಕಲಾಸಂಸ್ಕಾರ ದೊಡ್ಡದು; ಅವರ ಜೀವನಸಂಸ್ಕಾರ ಮತ್ತೂ ಪಕ್ವವಾದದ್ದು.

ಮೇಲೆ ಹೇಳಿದ ಸಂಭಾಷಣೆಯಾದ ಮೂರು ತಿಂಗಳಿಗೆ ನಾನು ಮತ್ತೆ ಕರೆ ಮಾಡಿದರೂ ವರ್ಮರು ನನಗೆ ಸಿಕ್ಕಲಿಲ್ಲ. ಕಲಾವಿದರಿಗೆ ಕಲಾವಿಚಾರದಲ್ಲಿ ಒತ್ತಡ ಹೇರಬಾರದೆಂಬುದು ನನ್ನ ಗಾಢ ನಂಬಿಕೆ. ಅದು ಅವರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಲ್ಲದು. ಕಲಾನಿರ್ಮಾಣವಾಗುವುದು ಕಲಾವಿದನಿಗೆ ಲಹರಿ ಬಂದಾಗ, ಭಾವ ತುಂಬಿದಾಗ. ಮಿಕ್ಕ ಕೆಲವು ಚಿತ್ರಗಳನ್ನು ಮೂಡಿಸಲು ತೊಡಗಿದ್ದ ವರ್ಮರಿಗೆ ಯಾವ ಲಹರಿಯೋ ಏನೋ, ನಾನೇಕೆ ಸುಮ್ಮನೆ “ಚಿತ್ರ ಬರೆದದ್ದು ಆಯಿತೇ? ಅಯಿತೇ?” ಎಂದು ಒತ್ತಡ ಹೇರಲಿ? ಚಿತ್ರವು ಮುಗಿದೊಡನೆ ಅವರ ಶಿಷ್ಯ ನಮಗೆ ಆ ವಾರ್ತೆಯನ್ನು ಮುಟ್ಟಿಸುವನು, ಆಗ ಗಣೇಶರೊಡಗೂಡಿ ನಾನು, ವಾಸುಕಿ ಮತ್ತೊಮ್ಮೆ ಭೇಟಿಯಾದರಾಯಿತು ಎಂದುಕೊಂಡು ಸಮ್ಮನಿದ್ದೆ.

ವರ್ಮರ ಕಲಾಕೃತಿಯನ್ನು ಕಾಣುವ ಕಾತರದಲ್ಲಿದ್ದವನಿಗೆ ಬಂದದ್ದು ಅವರ ಕಲೆಯ ವಾರ್ತೆಯಲ್ಲ, ಮರಣವಾರ್ತೆ.

ಯಶೋದಾ-ಕೃಷ್ಣರ ಚಿತ್ರವೇನೋ ಸಂಪೂರ್ಣವಾಗಿತ್ತು. ಆದರೆ ಪುರಂದರದಾಸರ ಮತ್ತು ಕೃಷ್ಣನ ಸೊಗಸಾದ ಚಿತ್ರವನ್ನು ವರ್ಮರು ನನ್ನ ಮನಸ್ಸಿನಲ್ಲಿ ಮೂಡಿಸಿ, ಕೃಷ್ಣನ ಬಳಿ ತೆರಳಿದರು. ಆ ಚಿತ್ರದ ಕಾಣ್ಕೆ ನನಗಾದರೂ, ಅದನ್ನು ನೋಡುವ ಭಾಗ್ಯ ನನ್ನದಾಗಲಿಲ್ಲ. ಅಂತಹ ಅತ್ಯುತ್ಕೃಷ್ಟ ಕಲ್ಪನೆಗೆ ಬಣ್ಣಹಚ್ಚುವ ಸಾಮರ್ಥ್ಯ ನನಗಿಲ್ಲ. ಯಾವೊಬ್ಬ ಚಿತ್ರಗಾರನಲ್ಲಿ ಇದನ್ನು ಹೇಳಿ ಚಿತ್ರಿಸಿದರೂ, ಅದು ವರ್ಮರು ನನ್ನ ಮನಸ್ಸಿನಲ್ಲಿರಿಸಿದ ಚಿತ್ರಪಟಕ್ಕಿಂತ ಭಿನ್ನವಾಗಿ ಮೂಡುವ ಸಂಭವವೇ ಹೆಚ್ಚು. ಹೀಗಾಗಿ, ನನ್ನ ಮತ್ತು ವರ್ಮರ ಆ ಮಧುರ ಸ್ಮೃತಿಯನ್ನೇ ಅಕ್ಷರಗಳಲ್ಲಿ ಚಿತ್ರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ; ಅಲ್ಲ, ನನ್ನಲ್ಲಿ ಚಿತ್ರಿತವಾಗಿರುವ ಅವರ ಸ್ಮೃತಿಚಿತ್ರದ ಪ್ರತಿಯನ್ನು ಮಾಡಿದ್ದೇನೆ.

ಅಂದು ವರ್ಮರು ಕೈಯಲ್ಲಿ ಹಿಡಿದ ಕುಂಚ ಕಂಡಿತು, ಅವರನ್ನು ಬಿಗಿದ ಯಮಪಾಶ ಕಾಣಲಿಲ್ಲ; ಭಾವದೊತ್ತಡಕ್ಕೆ ಮಣಿದು ಕುಂಚವನ್ನು ಕೈ ನಡೆಸುತ್ತಿರುವುದು ಎಂದುಕೊಂಡೆವು, ರಕ್ತದೊತ್ತಡಕ್ಕೆ ಮಣಿದು ಕೈ ನಡುಗುತ್ತಿದ್ದುದು ತಿಳಿಯಲಿಲ್ಲ; ವರ್ಮರ ಮನೆಯ ಬಾಗಿಲಿನಲ್ಲಿ ಕಲಾಪೋಷಕರು ಕಾಯುತ್ತ ನಿಂತಿದ್ದು ತಿಳಿದಿತ್ತು, ಅವರ ಸಾಲಿನಲ್ಲಿ ಜವರಾಯನು ನಿಂತಿದ್ದು ಎಣಿಕೆಗೆ ಬರಲಿಲ್ಲ; ಜಗದೋದ್ಧಾರನನ್ನು ವರ್ಮರು ಕರೆದ ಪರಿಯನ್ನು ಕಂಡೆವು, ಆದರೆ ಜಗದೋದ್ಧಾರನೇ ಇವರನ್ನು ಕರೆಸಿಕೊಳ್ಳುತ್ತಿರುವುದು ತಿಳಿಯಲಿಲ್ಲ.

ನಾನು ಗಣೇಶರು ಬರೆದ ‘ಪಂಕ್ತಿಪಾವನರು’ ಪುಸ್ತಕವನ್ನು ಪರಿಚಯಿಸುವಾಗ, ಅದರಲ್ಲಿ ವರ್ಮರ ಜೀವನಗೀತೆಯನ್ನು ಹಾಡಿದೆನೆಂದು ಭಾವಿಸಿದ್ದೆ, ಅದು ಅವರ ಮರಣಗೀತೆಯಾದೀತೆಂದು ಭಾವಿಸಿರಲಿಲ್ಲ. 

ವರ್ಮರ ಚಿತ್ರಗಳು ಬರಿಯ ಕಲಾಕೃತಿಗಳಷ್ಟೇ ಅಲ್ಲ; ಅವು ವರ್ಮರ ಸಾಧನೆಯ ಮುದ್ರೆಯನ್ನು ಜಗತ್ತಿನಲ್ಲಿ ಒತ್ತಿವೆ. ಇಂತಹ ಕಲಾವಿದರ ಜೊತೆ ಕೆಲವು ಕ್ಷಣಗಳನ್ನು ಕಳೆದದ್ದು ನನ್ನ ಭಾಗ್ಯ. 

- ಸರ್ವಂ ಶಿವಂ -

The Dharma Dispatch is now available on Telegram! For original and insightful narratives on Indian Culture and History, subscribe to us on Telegram.

logo
The Dharma Dispatch
www.dharmadispatch.in